ಬೆಳಗಾವಿ: ಜಿಲ್ಲೆಯಲ್ಲಿ ಮೊದಲ ಬಾರಿಗೆ 'ಆ್ಯಪ್' ಆಧರಿಸಿ ಜಾನುವಾರು ಗಣತಿ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಜಿಲ್ಲೆಯ ಎಲ್ಲ ಮನೆಗಳಿಗೆ ಗಣತಿದಾರರು ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ ಶಿಂಧೆ ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 21ನೇ ರಾಷ್ಟ್ರೀಯ ಜಾನುವಾರು ಗಣತಿ&2024ರ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, 21ನೇ ಜಾನುವಾರು ಗಣತಿಯು ಸೆಪ್ಟೆಂಬರ್ 1ಕ್ಕೆ ದೇಶಾದ್ಯಂತ ಆರಂಭಗೊಂಡು ಡಿಸೆಂಬರ್&31ರ ವರೆಗೆ ಚಾಲ್ತಿಯಲ್ಲಿರುತ್ತದೆ. ಇದುವರೆಗೆ ಪುಸ್ತಕದಲ್ಲಿ ಗಣತಿ ಮಾಹಿತಿ ನಮೂದಿಸಲಾಗುತಿತ್ತು. ಆದರೆ, ಮೊದಲ ಬಾರಿಗೆ ಸ್ಮಾರ್ಟಫೋನ್ ಬಳಸಿ ಮನೆ ಮನೆಗೆ ತೆರಳಿ ಗಣತಿಯಲ್ಲಿ ತೊಡಗಿಸಿಕೊಳ್ಳಲಾತ್ತಿದೆ. ಅದಕ್ಕಾಗಿ ಕೇಂದ್ರ ಪಶು ಸಂಗೋಪನೆ ಇಲಾಖೆಯಿಂದಲೇ '21ಸ್ಟೆ ಲೈವ್ಸ್ಪಾಕ್ ಸೆನ್ಸಸ್' ಎನ್ನುವ ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಗಣತಿದಾರರು ಆ್ಯಪ್ ಬಳಕೆ ಮಾಹಿತಿ ಪಡೆದು 21ನೇ ರಾಷ್ಟ್ರೀಯ ಜಾನುವಾರು ಗಣತಿ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 247 ಗಣತಿದಾರರು, 54 ಮೇಲ್ವಿಚಾರಕರು ಮನೆ ಮನೆಗೆ ತೆರಳಿದರೆ, ಮೇಲ್ವಿಚಾರಕರು ಹಾಗೂ ನೋಡಲ್ ಅಧಿಕಾರಿಗಳು ಅದರ ಒಟ್ಟು ಉಸ್ತುವಾರಿ ವಹಿಸಿಕೊಳ್ಳುಲಿದ್ದಾರೆ. ನಗರ ಪ್ರದೇಶದಲ್ಲಿ 3,24,584 ಕುಟುಂಬಗಳವೆ. ಗ್ರಾಮೀಣ ಪ್ರದೇಶದಲ್ಲಿ 8,35,657 ಕುಟುಂಬಗಳಿವೆ. ಒಟ್ಟು ಜಿಲ್ಲೆಯಲ್ಲಿ ಅಂದಾಜು 11,60,241 ಕುಟುಂಬಗಳ ಸಂಖ್ಯೆಯಿದ್ದು, 247 ಗಣತಿದಾರರು ಹಾಗೂ 54 ಮೇಲ್ವಿಚಾರಕರು ಗಣತಿ ಕಾರ್ಯನಿರ್ವಹಿಸಲಿದ್ದಾರೆ ಎಂದರು. ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ರಾಜೀವ ಕೂಲೇರ, ಡಾ.ಅಂಬುರಾಯ ಕೊಡಗಿ, ಡಾ.ಮೋಹನ್ ಕಾಮತ್, ಡಾ.ಸದಾಶಿವ ಉಪ್ಪಾರ ಇತರರಿದ್ದರು.