ವಿ.ಎಸ್.ದೊಡ್ಡಿ ಗ್ರಾಮದಲ್ಲಿ ಮಳೆಯ ನೀರು ಜಮೀನಿಗೆ ನುಗ್ಗಿ ಬೆಳ್ಳುಳ್ಳಿ ಫಸಲು ಹಾಳಾಗಿರುವುದು. 
ಜಿಲ್ಲೆ

ಮನೆಗಳಿಗೆ ನೀರು ನುಗ್ಗಿ ಅವಾಂತರ

Chamarajanagar

ಹನೂರು: ತಾಲೂಕಿನ ಒಡೆಯರಪಾಳ್ಯ ಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆಗಳ ಕಾಲ ವಿಪರೀತ ಜೋರು ಮಳೆ ಸುರಿದ ಪರಿಣಾಮ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತಲ್ಲದೆ ಜಮೀನಿಗಳಿಗೆ ನೀರು ನುಗ್ಗಿ ಫಸಲು ಹಾನಿಯಾಗಿದೆ.
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಆಗಾಗ್ಗೆ ಎಡಬಿಡದೆ ಜೋರು ಮಳೆ ಸುರಿಯುತ್ತಿದ್ದು, ಜಮೀನುಗಳಲ್ಲಿನ ಆಲೂಗಡ್ಡೆ ಹಾಗೂ ಬೆಳ್ಳುಳ್ಳಿ ಫಸಲು ನಾಶವಾಗಿದೆ. ಇತ್ತ ಕಿರು ಸೇತುವೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಆಗಾಗ್ಗೆ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಸಂಚಾರಕ್ಕೆ ತೊಡಕಾಗುತ್ತಿದೆ. ಇದೀಗ ಈ ಭಾಗದಲ್ಲಿ ಮಂಗಳವಾರ ಮತ್ತೆ ಜೋರು ಮಳೆ ಸುರಿದ ಪರಿಣಾಮ ಕೊರಮನಕತ್ತರಿ ಬಳಿಯ ಉಡುತೊರೆ ಹಳ್ಳದ ಕಿರು ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಬಂದ್ ಆಗಿದೆ. ಅಲ್ಲದೆ, ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿ.ಎಸ್. ದೊಡ್ಡಿ ಗ್ರಾಮದಲ್ಲಿ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಅವಾಂತರ ಸೃಷ್ಟಿಸಿತು. ಮಳೆ ಕೊಂಚ ತಗ್ಗಿದ ಪರಿಣಾಮ ಜನರು ಮನೆಯ ನೀರನ್ನು ಹೊರಗೆ ಹಾಕಿ ತುಂಬಾ ತೊಂದರೆಯನ್ನು ಅನುಭವಿಸಿದರು. ಇನ್ನು ನೂರಾರು ಎಕರೆ ಪ್ರದೇಶದಲ್ಲಿ ಆಲೂಗಡ್ಡೆ ಹಾಗೂ ಬೆಳ್ಳುಳ್ಳಿ ಫಸಲು ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಆಗಾಗ್ಗೆ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಮನೆಗಳು ಹಾನಿಗೊಳಗಾಗುತ್ತಿವೆ. ಅಲ್ಲದೆ, ನೂರಾರು ಎಕರೆಗೆ ನೀರು ನುಗ್ಗಿ ಬೆಳೆಗಳು ನಾಶವಾಗಿದ್ದು, ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಈ ಭಾಗದಲ್ಲಿ ಮಳೆಯ ಅವಾಂತರದಿಂದ ಜನರಿಗೆ ತೊಂದರೆಯಾಗುತ್ತಿವೆ. ಆದರೆ, ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಇತ್ತ ಗಮನಹರಿಸಿ ಬೆಳೆನಷ್ಟಕ್ಕೆ ಪರಿಹಾರ ದೊರಕಿಸಿಕೊಡಬೇಕು ಜತೆಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಪರಿವರ್ತನಾ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಹೊಸದೊಡ್ಡಿಯ ಎನ್. ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.