ಜಿಲ್ಲೆ

ಮನೆಗಳ ಮೇಲೆ ಕಪ್ಪು ಬಾವುಟ ಪ್ರದರ್ಶನ

ಸವದತ್ತಿ: ಸಂಯುಕ್ತ ಕಿಸಾನ್ ಮೋರ್ಚಾ ನೀಡಿದ ಕರಾಳ ದಿನಾಚರಣೆ ಬೆಂಬಲಿಸಿ ಬುಧವಾರ ಇಲ್ಲಿನ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಸದಸ್ಯರು ಕೈಗೆ ಕಪ್ಪು ಪಟ್ಟಿ ಧರಿಸಿ, ತಮ್ಮ ಮನೆಗಳ ಮೇಲೆ ಕಪ್ಪು ಬಾವುಟ ಹಾರಿಸಿದರು. ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಸಂಘಟನೆ ಅಧ್ಯಕ್ಷ ಎಲ್.ಎಸ್.ನಾಯಕ ಮಾತನಾಡಿ, ರೈತ ವಿರೋಧಿ ಕಾಯ್ದೆ, ವಿದ್ಯುತ್ ತಿದ್ದುಪಡಿ ಮಸೂದೆ, ಎಪಿಎಂಸಿ ಕಾಯ್ದೆಗಳನ್ನು ಕೂಡಲೇ ಹಿಂಪಡೆದು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಜಾರಿಗೊಳಿಸಬೇಕು. ಜತೆಗೆ ಭಾರತ ಕಾರ್ಮಿಕ ಸಮ್ಮೇಳನ ನಡೆಸಲು ಕ್ರಮ ಜರುಗಿಸಿ. ನರೇಗಾದಡಿ 100 ದಿನಗಳ ಬದಲಾಗಿ ವಾರ್ಷಿಕ 200 ದಿನಗಳ ಕೆಲಸ ನೀಡಿ. ದಿನಗೂಲಿ ವೇತನವನ್ನು 289 ರಿಂದ 600 ರೂಪಾಯಿಗೆ ಏರಿಸಿ ಅದನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕುಎಂದು ಒತ್ತಾಯಿಸಿದರು.

ತಾಲೂಕಿನ ಉಗರಗೋಳ ಗ್ರಾಮದಲ್ಲಿ ರಾಜೇಶ್ವರಿ ರೇಣ್ಕಿಗೌಡರ ಮತ್ತು ಹಂಚಿನಾಳದಲ್ಲಿ ಜೆ.ವಿ. ಅಗಡಿ ರೈತ ಸಂಘಟನೆಗಳೊಂದಿಗೆ ಕಾಯ್ದೆ ವಿರೋಧಿಸಿ ಮನೆ ಮುಂದೆ ಕಪ್ಪು ಬಾವುಟ ಪ್ರದರ್ಶಿಸಿದರು. ಶ್ರೀಕಾಂತ ಹಟ್ಟಿಹೊಳಿ, ಎಚ್.ಎಂ. ಸಿದ್ದಾಪುರ ಮನೆ ಎದುರು ಕಪ್ಪು ಬಾವುಟ ಪ್ರದರ್ಶಿಸಿದರು.

ಖಾನಾಪುರ ವರದಿ: ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಾರತ ಕಿಸಾನ್ ಯೂನಿಯನ್ ಕರೆ ನೀಡಿದ್ದ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧದ ಸಾಂಕೇತಿಕ ಪ್ರತಿಭಟನೆ ತಾಲೂಕಿನ ಗಂದಿಗವಾಡ ಗ್ರಾಮದಲ್ಲಿ ಬುಧವಾರ ಜರುಗಿತು. ಪ್ರತಿಭಟನೆಯಲ್ಲಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಅಶೋಕ ಯಮಕನಮರಡಿ, ತಾಲೂಕಾಧ್ಯಕ್ಷ ಗುರುಲಿಂಗಯ್ಯ ಪೂಜೇರ, ವೀರೇಶ ಮಂಡೇದ, ವಾಸು ನೇಮಗೊಂಡ, ಕಲ್ಲಪ್ಪ ನೇಮಗೊಂಡ ಸೇರಿದಂತೆ ರೈತ ಮುಖಂಡರು ಮತ್ತು ಕೃಷಿಕ ಸಮಾಜ, ರೈತ ಸಂಘಟನೆ ಪದಾಧಿಕಾರಿಗಳು ಕಪ್ಪು ಪಟ್ಟಿ ಧರಿಸಿ ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.