ಜಿಲ್ಲೆ

ಮನೆಗಳ ಮೇಲೆ ಹಾರಾಡಿದ ರಾಷ್ಟ್ರಧ್ವಜ

ಚಿಕ್ಕಮಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಹರ್ ಘರ್ ತಿರಂಗಾ ಅಭಿಯಾನ ಜಿಲ್ಲೆಯಲ್ಲಿ ರಂಗೇರುತ್ತಿದ್ದು ಒಂದು ದಿನ ಮುನ್ನವೇ ಹಲವು ಮನೆಗಳು ಹಾಗೂ ವಾಹನಗಳ ಮೇಲೆ ರಾಷ್ಟ್ರಧ್ವಜ ರಾರಾಜಿಸುತ್ತಿದೆ. ಶುಕ್ರವಾರ ಶಾಲಾ ಮಕ್ಕಳು ಧ್ವಜ ಹಿಡಿದು ಸಂಭ್ರಮಿಸಿದರೆ, ಹಲವು ವಿದ್ಯಾರ್ಥಿಗಳು ಭಾರತ್ ಮಾತಾ ಕೀ ಜೈ ಘೊಷಣೆಯೊಂದಿಗೆ ಮೆರವಣಿಗೆ ನಡೆಸಿದರು. ನಗರಸಭೆ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳು ವಿದ್ಯುತ್ ದೀಪಾಲಂಕಾರದೊಂದಿಗೆ ತ್ರಿವರ್ಣ ರಂಗಿನಲ್ಲಿ ಕಂಗೊಳಿಸಿ ನಾಗರಿಕರನ್ನು ಆಕರ್ಷಿಸುತ್ತಿವೆ.

ನಗರದ ಬಸವನಹಳ್ಳಿ ಮಹಿಳಾಶ್ರಮ ಶಾಲಾ ಮಕ್ಕಳು ಸ್ವಾತಂತ್ರ್ಯ ಅಮೃತ ಮಹೋತ್ಸದ 75 ಸಂಖ್ಯೆ ಪ್ರದರ್ಶನದೊಂದಿಗೆ ವೃತ್ತಾಕಾರದಲ್ಲಿ ನಿಂತು ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ ದೃಶ್ಯವನ್ನು ಮಕ್ಕಳ ಕುಟುಂಬದವರು ಹಾಗೂ ಶಿಕ್ಷಕರು ಕಣ್ತುಂಬಿಕೊಂಡರು. ನಂತರ ಬಸವನಹಳ್ಳಿ ಮುಖ್ಯರಸ್ತೆ, ಅರವಿಂದ ನಗರ, ಕೆಎಂ ರಸ್ತೆ ಮೂಲಕ ಶಿಕ್ಷಕರೊಂದಿಗೆ ನೂರಾರು ವಿದ್ಯಾರ್ಥಿಗಳು ತಿರಂಗಾದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ನಗರದ ಎಲ್ಲ ವಾರ್ಡ್​ಗಳಲ್ಲೂ ನಗರಸಭೆಯಿಂದ ಮನೆ ಮನೆಗೆ ತೆರಳಿ ಧ್ವಜ ವಿತರಿಸಿದರು. ನಗರಸಭೆ ಹಳೇ ಕಚೇರಿ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳು, ವೃತ್ತಗಳು ತ್ರಿವರ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಕತ್ತಲಾಗುತ್ತಿದ್ದಂತೆ ಕೇಸರಿ, ಬಿಳಿ, ಹಸಿರು ವರ್ಣದ ಬೆಳಕಿನ ಮುಂದೆ ಯುವಕ, ಯುವತಿಯರು ಸೆಲ್ಪಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಜಿಲ್ಲಾಧಿಕಾರಿ ಕಚೇರಿ, ಎಸ್ಪಿ ಕಚೇರಿ ವೃತ್ತ, ಆಜಾದ್ ವೃತ್ತ, ಹಲವು ರಸ್ತೆ, ಅಂಗಡಿಗಳು ತ್ರಿವರ್ಣದಲ್ಲಿ ಝುಗಮಗಿಸುತ್ತಿವೆ.

ನಗರದ ಬಸವನಹಳ್ಳಿ, ವಿಜಯಪುರ, ಕೋಟೆ, ಉಪ್ಪಳ್ಳಿ, ಹೌಸಿಂಗ್​ಬೋರ್ಡ್ ಸೇರಿದಂತೆ ವಿವಿಧ ಬಡಾವಣೆಯ ನೂರಾರು ಮನೆಗಳ ಮೇಲೆ ಶುಕ್ರವಾರವೇ ರಾಷ್ಟ್ರಧ್ವಜ ಹಾರಿಸಲಾಗಿದೆ. ಮನೆ ಮೇಲಿನ ವಿದ್ಯುತ್ ಪೈಪ್​ಗಳು, ಕಿಟಕಿ ಸರಳು, ನೀರಿನ ಟ್ಯಾಂಕ್, ಪಿಲ್ಲರ್, ಮನೆ ಮುಂಭಾಗ ಗ್ಲಾಸ್​ಗಳಿಗೆ ಧ್ವಜ ಕಟ್ಟಿದ್ದಾರೆ.