ಜಿಲ್ಲೆ

ಮನೆ ಹಾನಿಗೆ 10 ಸಾವಿರ ರೂ. ಪರಿಹಾರ

ಹಾನಗಲ್ಲ: ಹಾನಗಲ್ಲ, ಶಿಗ್ಗಾಂವಿ ಮತ್ತು ಸವಣೂರು ತಾಲೂಕಿನಲ್ಲಿ ಮಳೆಗೆ ಮನೆಗಳು ಬಿದ್ದಿದ್ದು, ತಕ್ಷಣವೇ ಆ ಕುಟುಂಬಗಳಿಗೆ 10 ಸಾವಿರ ರೂ. ಪರಿಹಾರ ವಿತರಿಸಲು ತಾಲೂಕು ಆಡಳಿತ, ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ಕೂಡಲ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ, ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿ ಅವರು ಮಾತನಾಡಿದರು.

ಹಾವೇರಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ. ಇದರೊಂದಿಗೆ ಜೋರಾದ ಗಾಳಿ ಬೀಸುತ್ತಿರುವುದರಿಂದ ಬೆಳೆಗಳೆಲ್ಲ ನೆಲಕ್ಕುರುಳಿವೆ. ಗೋವಿನಜೋಳ ಬೆಳೆ ನೆಲಕ್ಕೆ ಬಿದ್ದು ಬಹಳಷ್ಟು ಹಾನಿಯಾಗಿದೆ. ಬೆಳೆ ಹಾನಿಯ ಬಗ್ಗೆ ಕೃಷಿ, ಕಂದಾಯ ಇಲಾಖೆ ಸಿಬ್ಬಂದಿ ಪ್ರಾಥಮಿಕ ಪರಿಶೀಲನೆ ಕೈಗೊಂಡು ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಕಳೆದ ವರ್ಷ ಆಗಸ್ಟ್​ನಲ್ಲಿ ಪ್ರವಾಹ ಬಂದು ಸಮಸ್ಯೆಯಾದ ವರದಾ ನದಿ ಪಕ್ಕದ ಗ್ರಾಮಗಳಿಗೆ ಕೂಡಲ, ವರ್ದಿ, ನಾಗನೂರು, ತೆವರಮೆಳ್ಳಳ್ಳಿ, ಮೆಳ್ಳಾಗಟ್ಟಿ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಮುಂಜಾಗ್ರತೆ ಕ್ರಮ ಕೈಕೊಂಡು ಗ್ರಾಮಸ್ಥರನ್ನು ಸ್ಥಳಾಂತರಿಸಲು, ಮೂಲಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.

ಕೃಷಿ ಆಯುಕ್ತರು, ಮಾರ್ಕೆಟಿಂಗ್ ಫೆಡರೇಶನ್ ಅಧಿಕಾರಿಗಳ ಸಭೆ ನಡೆಸಿ ಯೂರಿಯಾ ಸಮಸ್ಯೆ ಕುರಿತು ರ್ಚಚಿಸಲಾಗಿದೆ. ಮುಖ್ಯಮಂತ್ರಿಗಳು ಕೇಂದ್ರ ಸಚಿವ ಸದಾನಂದಗೌಡರೊಂದಿಗೆ ರ್ಚಚಿಸಿದ್ದು, ಸುಮಾರು 15 ರೇಕ್​ಗಳನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಗೋವಿನಜೋಳ ಬೆಳೆದಿರುವ ಪ್ರತಿ ಜಿಲ್ಲೆಗಳಿಗೆ 5 ಸಾವಿರ ಟನ್ ಬೇಡಿಕೆ ಸಲ್ಲಿಸಲಾಗಿದೆ. ಎಂಸಿಎಫ್ ಕಂಪನಿಯಿಂದಲೂ ಮುಂದಿನ 15 ದಿನಗಳಲ್ಲಿ ಯೂರಿಯಾ ಪೂರೈಕೆಯಾಗಲಿದೆ ಎಂದರು.

ಸಂಸದ ಶಿವಕುಮಾರ ಉದಾಸಿ, ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜಿಪಂ ಸದಸ್ಯ ಮಾಲತೇಶ ಸೊಪ್ಪಿನ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ, ಪೊಲೀಸ್ ವರಿಷ್ಠ ಕೆ.ಜೆ. ದೇವರಾಜ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ರಮೇಶ ದೇಸಾಯಿ, ಸವಣೂರು ಎಸಿ ಅನ್ನಪೂರ್ಣ ಮುದುಕಣ್ಣನವರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ಇಒ ಚನ್ನಪ್ಪ ರಾಯಣ್ಣನವರ, ಸಿಪಿಐ ಶಿವಶಂಕರ ಗಣಾಚಾರಿ ಇತರರು ಉಪಸ್ಥಿತರಿದ್ದರು.

ಕಳೆದ ವರ್ಷದ ಅತಿವೃಷ್ಟಿ ಪಾಠ

ಕಳೆದ ಬಾರಿಯ ಅತಿವೃಷ್ಟಿ ಸಂದರ್ಭದಲ್ಲಿನ ಗ್ರಾಮಗಳನ್ನು ಸ್ಥಳಾಂತರಿಸಿ ನಿವೇಶನ ಗುರುತಿಸಲಾಗಿತ್ತು. ಆದರೆ, ಗ್ರಾಮಸ್ಥರು ತೆರಳಲು ಒಪ್ಪುತ್ತಿಲ್ಲ. ಇಲ್ಲಿಯೇ ಮನೆ ಕಟ್ಟಿಕೊಳ್ಳುವುದಾಗಿ ಕೇಳಿಕೊಂಡಿದ್ದಾರೆ. ಇಲ್ಲಿ ಜನಸಂಖ್ಯೆ, ಪ್ರವಾಹ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಿದ್ದೇವೆ. ಕಳೆದ ವರ್ಷ ಮನೆ ಕಳೆದುಕೊಂಡಿರುವ 22 ಸಾವಿರ ಜನರಲ್ಲಿ ಮನೆಗಳ ನಿರ್ವಣಕ್ಕೆ ಮುಂದಾಗಿರುವ ಫಲಾನುಭವಿಗಳಿಗೆ ಹಂತ-ಹಂತವಾಗಿ ಹಣ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಎನ್​ಡಿಆರ್​ಎಫ್​ನಲ್ಲಿ ಮನೆ ನಿರ್ವಣಕ್ಕಾಗಿ 38 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಸೋಮವಾರದಿಂದ ಮೂರನೇ ಕಂತು ಬಿಡುಗಡೆಯಾಗುತ್ತದೆ ಎಂದು ಬೊಮ್ಮಾಯಿ ವಿವರಿಸಿದರು.