ಜಿಲ್ಲೆ

ಮನೆ ಸೇರುತ್ತಿವೆ ಕ್ರಿಮಿ ಕೀಟಗಳು

ಕಲಬುರಗಿ: ಕಳೆದ ಎರಡ್ಮೂರು ದಿನದಿಂದ ಮಳೆ ಅಬ್ಬರಿಸುತ್ತಿದ್ದು, ರಸ್ತೆಗಳೆಲ್ಲ ರಾಢಿಮಯವಾಗಿ ಜನ ಜೀವನ ಅಸ್ತವ್ಯವಸ್ಥವಾಗಿದೆ. ಈ ಮಧ್ಯೆ ನಗರದಲ್ಲಿನ ತೆರೆದ ಚರಂಡಿಗಳಲ್ಲಿ ಸಂಗ್ರಹವಾಗಿರುವ ನೀರಿನಲ್ಲಿ ಕ್ರಿಮಿಕೀಟಗಳು ಸೃಜನೆಯಾಗಿ ಮಳೆ ಬಂದಾಗ ಅಕ್ಕಪಕ್ಕದ ಮನೆಗೆ ನುಗ್ಗುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನರು ಜೀವನ ಸಾಗಿಸುವಂತೆ ಆಗಿದೆ.
ನಗರದ ವಾರ್ಡ್ ೩೬ರ ಧನಗರ್ ಗಲ್ಲಿಯಲ್ಲಿ ಚರಂಡಿ ತುಂಬಿ ಹಲವು ದಿನಗಳಿಂದ ಹುಳುಗಳು ಸೃಷ್ಟಿಯಾಗಿದ್ದು, ಮಳೆಯಿಂದ ಚರಂಡಿ ನೀರು ಮೇಲೆ ಬಂದು ಹುಳುಗಳು ಅಕ್ಕಪಕ್ಕದ ಮನೆಗಳಿಗೆ ಬರುತ್ತಿವೆ. ಹಲವು ದಿನಗಳಿಂದ ಇದೇ ಪರಿಸ್ಥಿತಿ ಇದ್ದು, ಪಾಲಿಕೆ ಸಿಬ್ಬಂದಿ, ವಾರ್ಡ್ ಸದಸ್ಯರ ಗಮನಕ್ಕೆ ತಂದರೂ ಸಮಸ್ಯೆಗೆ ಪರಿಹಾರ ದೊರಕಿಲ್ಲ. ಮನೆ ಒಳಗಡೆ ಹುಳುಗಳ ಪ್ರವೇಶದಿಂದ ಜನರಲ್ಲಿ ಭಾರಿ ಆತಂಕ ಮೂಡಿದ್ದು, ಸಾಂಕ್ರಾಮಿಕ ರೋಗದ ಭೀತಿ ಸೃಷ್ಟಿಯಾಗಿದೆ.