ಹಾಸನ: ಮಹಾಲಯ ಅಮಾವಾಸೆ ದಿನ ಬುಧವಾರ ಬೆಳಗಿನ ಜಾವ ಮನೆಯೊಂದರ ಬಾಗಿಲ ಮುಂದೆ ಕೋಳಿ ಬಲಿ ಕೊಟ್ಟು ವಾಮಾಚಾರ ಮಾಡಿದ ಘಟನೆ ನಗರದ ಬೇಲೂರು ರಸ್ತೆಯ ವಿಜಯ ನಗರದಲ್ಲಿ ನಡೆದಿದೆ.
ನಗರದ ಸಮೀಪ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಬಳಿ ಇರುವ ಪ್ರದೀಪ್ ಎಂಬುವರ ಮನೆಯ ಬಾಗಿಲಿನ ಮುಂದೆ ವಾಮಾಚಾರ ನಡೆದಿದೆ. ಇವರ ಮನೆಯ ಪಕ್ಕದಲ್ಲಿಯೇ ಖಾಸಗಿ ಶಾಲೆಯೊಂದಿದ್ದು, ಶಾಲೆಯ ಮಾಲೀಕರಿಗೂ ಹಾಗೂ ಈ ಮನೆಯರವರ ನಡುವೆ ಆಗಾಗ್ಗೆ ಜಗಳವಾಗುತಿತ್ತು. ಈ ನಡುವೆ ಶಾಲೆಯ ಮಾಲೀಕರು ಮನೆಯನ್ನು ಖಾಲಿ ಮಾಡಿಸುವುದು ನಮಗೆ ಗೊತ್ತಿದೆ ಎಂದು ಕಳೆದ ಎರಡು ದಿನಗಳ ಹಿಂದೆ ಜಗಳ ಮಾಡಿ ಬೆದರಿಸಿದ್ದರು ಎಂದು ಮನೆ ಮಾಲೀಕರು ದೂರಿದ್ದಾರೆ.
ಪ್ರದೀಪ್ ಮನೆ ಬಾಗಿಲ ಮುಂದೆ ಕೋಳಿ ಬಲಿ ಕೊಟ್ಟು ಇದರ ಸುತ್ತ ಮಡಿಕೆ ಒಡೆದ ರೀತಿ, ಕುಂಕುಮ, ನಾನಾ ರೀತಿಯ ಬೆಳೆ ಕಾಳುಗಳನ್ನು ಚೆಲ್ಲಿ ಬತ್ತಿ ದಾರ ಕಂಡು ಬಂದಿದೆ. ಬೆಳಿಗ್ಗೆ ಬಾಗಿಲು ತೆಗೆಯುತ್ತಿದ್ದಂತೆ ಇದನ್ನು ಕಂಡ ಮನೆ ಮಾಲೀಕರು ಗಾಬರಿಗೊಂಡು ತಕ್ಷಣ ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿ ಈ ರೀತಿ ವಾಮಾಚಾರ ಮಾಡಿದವರ ವಿರುದ್ಧ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.