ಕೊಳ್ಳೇಗಾಲ: ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಂದಿನಿ ಪಾರ್ಲರ್ ತೆರೆಯಲಾಗುತ್ತಿದೆ ಎಂದು ಚಾಮರಾಜನಗರ ಸಹಕಾರಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ರಾಜಶೇಖರ ಮೂರ್ತಿ ಹೇಳಿದರು.
ತಾಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ಚಾಮುಲ್ ಒಕ್ಕೂಟದಿಂದ ನೂತನವಾಗಿ ತೆರೆಯಲಾಗಿರುವು ನಂದಿನಿ ಕ್ಷೀರಾ ಕೇಂದ್ರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
75 ಲಕ್ಷ ಲೀಟರ್ ಹಾಲು ಸಂಗ್ರಹಣ ಸಾಮರ್ಥ್ಯ ಹೊಂದಿರುವ ಚಾಮುಲ್, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಅಸ್ಸಾಂ ಇನ್ನಿತರ ರಾಜ್ಯಗಳಿಗೂ ಪೂರೈಕೆ ಮಾಡುತ್ತಿದೆ. ನಂದಿನಿ ಹಾಲಿನಿಂದ 160 ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದೇವೆ. ಇಂದು ನಂದಿನಿ ಹಾಲು ಮನೆ ಮನೆಗೆ ತಲುಪುತ್ತಿದೆ. ಗ್ರಾಹಕರಿಗೆ ಪರಿಶುದ್ಧ, ಕಲಬೆರಕೆ ರಹಿತ, ಗುಣಮಟ್ಟ ಸೇವೆ ನೀಡುತ್ತಿರುವುದರಿಂದ ನಂದಿನಿ, ಜನರ ಮಾತಾಗಿದೆ ಎಂದು ಹೇಳಿದರು.
ಚಾಮುಲ್ ನಿರ್ದೇಶಕ ಮಧುವನಹಳ್ಳಿ ನಂಜುಂಡಸ್ವಾಮಿ ಮಾತನಾಡಿ, ರೈತರ ಪರವಾಗಿರುವ ನಂದಿನಿ ಹಾಲನ್ನು ಪ್ರತಿಯೊಬ್ಬರು ಖರೀದಿ ಮಾಡಬೇಕು ಎಂದು ಮನವಿ ಮಾಡಿದರು.
ಕುಣಗಳ್ಳಿ ಗ್ರಾಪಂ ಅಧ್ಯಕ್ಷ ಕಲಾವತಿ ಮಾದೇಶ್, ಸದಸ್ಯ ಬಸವಲಿಂಗಪ್ಪ, ಮಾಜಿ ಉಪಾಧ್ಯಕ್ಷ ಎಂ.ಮಾದೇಶ್, ಚಾಮುಲ್ ಪ್ರಧಾನ ವ್ಯವಸ್ಥಾಪಕ ರಾಜಕುಮಾರ್, ಉಪ ವ್ಯವಸ್ಥಾಪಕ ಶಿವಕುಮಾರ್, ಸಹಾಯಕ ವ್ಯವಸ್ಥಾಪಕ ಗಿರೀಶ್, ಮಾರುಕಟ್ಟೆ ಅಧಿಕಾರಿ ರಾಘವೇಂದ್ರ, ಮಹಮ್ಮದ್ ನೂತನ್, ಉತ್ತಂಬಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನಾಗೇಂದ್ರಸ್ವಾಮಿ, ಮುಖಂಡರಾದ ನಂದೀಶ್, ಮಧುಸೂದನ್, ಮಂಟಯ್ಯ, ರಾಜೀವಪ್ಪ, ಪುಟ್ಟಮಲ್ಲೇಗೌಡ, ರಾಚೇಗೌಡ, ರಾಮಚಂದ್ರ, ಸೋಮಣ್ಣ ಇತರರು ಇದ್ದರು.