ಜಿಲ್ಲೆ

ಮನೆ ಮನೆಯಲ್ಲೂ ಬಸವನ ಆರಾಧನೆ

ಮುಂಡರಗಿ: ಮಣ್ಣೆತ್ತಿನ ಅಮಾವಾಸ್ಯೆ ಬಂದರೆ ರೈತ ಕುಟುಂಬಗಳಲ್ಲಿ ವಿಶೇಷ ಸಂಭ್ರಮ. ಮಳೆ, ಬೆಳೆ ಸಮೃದ್ಧಿಯಾಗಲಿ ಎನ್ನುವ ಆಶಯದೊಂದಿಗೆ ಅಮವಾಸ್ಯೆ ದಿನ ಮಣ್ಣೆತ್ತುಗಳಿಗೆ ಪೂಜೆ ಸಲ್ಲಿಸುತ್ತಾರೆ. ಅಮಾವಾಸ್ಯೆಯ ಒಂದೂವರೆ ತಿಂಗಳು ಪೂರ್ವದಲ್ಲೇ ಪಟ್ಟಣದ ಕೆಲ ಕುಂಬಾರ ಕುಟುಂಬದವರು ಮಣ್ಣೆತ್ತುಗಳನ್ನು ತಯಾರಿಸುತ್ತಾರೆ. ಜೇಡಿ ಮಣ್ಣಿನಿಂದ ಮಣ್ಣೆತ್ತುಗಳನ್ನು ತಯಾರಿಸಲಾಗುತ್ತದೆ. ಪಟ್ಟಣ ಸೇರಿ ಗ್ರಾಮೀಣ ಪ್ರದೇಶದಲ್ಲಿ ಮನೆ-ಮನೆಗೆ ತೆರಳಿ ಮಣ್ಣೆತ್ತುಗಳನ್ನು ಮಾರಾಟ ಮಾಡಲಾಗುತ್ತದೆ.

ಇತ್ತೀಚೆಗೆ ಕೆಲವರು ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ಎತ್ತಿನ ಮೂರ್ತಿಗಳನ್ನು ತಯಾರಿಸುತ್ತಾರೆ. ಮಣ್ಣಿನಿಂದ ತಯಾರಿಸುವಂತಹ ಎತ್ತುಗಳನ್ನು ಪೂಜಿಸುವ ಸಂಪ್ರದಾಯ ಇರುವುದರಿಂದ ಮಣ್ಣೆತ್ತುಗಳಿಗೆ ಹೆಚ್ಚು ಬೇಡಿಕೆ ಇದೆ. ಪರಿಸರ ಸ್ನೇಹಿ ಎತ್ತುಗಳನ್ನು ಪೂಜಿಸಲು ಜನ ಆದ್ಯತೆ ನೀಡುತ್ತಾರೆ.

ಪಟ್ಟಣದ ಈರಪ್ಪ ಕುಂಬಾರ, ದೇವಪ್ಪ ಕುಂಬಾರ, ನಾಗಪ್ಪ ಕುಂಬಾರ ಕುಟುಂಬ, ಮೊದಲಾದ ಕುಟುಂಬದವರು ತಮ್ಮ ಮನೆಯಲ್ಲಿ ಮಣ್ಣೆತ್ತುಗಳನ್ನು ತಯಾರಿಸಿ ಅದಕ್ಕೆ ಬಣ್ಣ ಹಚ್ಚಿ ಅಲಂಕರಿಸಿ ಮನೆ ಮನೆಗೆ ತೆರಳಿ ಜೋಡೆತ್ತಿಗೆ 20ರಿಂದ 25 ರೂ.ನಂತೆ ಮಾರಾಟ ಮಾಡುತ್ತಾರೆ.

ಒಂದು ತಿಂಗಳು ಮುಂಚೆಯೇ ಕುಟುಂಬದ ಸದಸ್ಯರು ಮಣ್ಣೆತ್ತು ತಯಾರಿಸುತ್ತಾರೆ. ಒಂದು ಕುಟುಂಬದವರು ಪ್ರತಿ ವರ್ಷ ಸುಮಾರು 300 ರಿಂದ 350 ಮಣ್ಣೆತ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಆದರೆ, ಈ ಬಾರಿ ಅಮವಾಸ್ಯೆ ದಿನದಂದು ಸೂರ್ಯ ಗ್ರಹಣ ಬಂದಿರುವ ಹಿನ್ನೆಲೆಯಲ್ಲಿ ಪ್ರತಿ ಕುಟುಂಬದವರು 150ರಿಂದ 200 ಮಣ್ಣೆತ್ತುಗಳನ್ನು ಮಾತ್ರ ತಯಾರಿಸಿದ್ದಾರೆ.

ನಾಗಪಂಚಮಿ, ಮಣ್ಣೆತ್ತಿನ ಅಮವಾಸ್ಯೆಯಂದು ಮಣ್ಣಿನಿಂದ ಎತ್ತು, ನಾಗದೇವತೆ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತೇವೆ. ಇದು ಲಾಭದಾಯಕ ಅಲ್ಲದಿದ್ದರೂ ನಮ್ಮ ಹಿರಿಯರು ಮಾಡಿಕೊಂಡು ಬಂದಂತ ಕಾಯಕವನ್ನು ಮರೆಯಬಾರದು ಎನ್ನುವ ಉದ್ದೇಶದಿಂದ ಮಣ್ಣೆತ್ತು ತಯಾರಿಸಿ ಮಾರಾಟ ಮಾಡುತ್ತೇವೆ.| ನಾಗಪ್ಪ ಕುಂಬಾರ, ಮಣ್ಣೆತ್ತಿನ ಮೂರ್ತಿ ತಯಾರಕ