ಹಾಸನ : ಚುನಾವಣಾ ಆಯೋಗ ರಾಜ್ಯದಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಅಂಚೆ ಮತದಾನಕ್ಕೆ ಅವಕಾಶ ಮಾಡಿಕೊಟ್ಟಿದೆ. ಅಂಚೆ ಮತದಾನಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ.
ಮನೆ, ಮನೆಗೆ ಬಳಿ ತೆರಳಿ ಮಾತದಾನ ಮಾಡಿಸುವುದಕ್ಕೆ ಈ ಮೊದಲು ಏ.29ರಿಂದ 30ವರೆಗೆ ಎರಡು ದಿನಗಳ ಕಾಲ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ನೋಂದಣಿ ಮಾಡಿಸಿಕೊಂಡವರಲ್ಲಿ 239 ಜನರು ಬಾಕಿ ಇರುವುದರಿಂದ ಮಂಗಳವಾರವೂ ಅವರುಗಳ ಮನೆಗೆ ತೆರಳಿ ಮತದಾನ ಮಾಡಿಸಿಕೊಳ್ಳಲಾಗುತ್ತದೆ. ಪ್ರತಿ ಮತ ಕೇಂದ್ರದ ವ್ಯಾಪ್ತಿಯ ಅಧಿಕಾರಿಗಳ ಐದು ಜನರ ತಂಡ ಮನೆ ಮನೆಗೆ ತೆರಳಿ ಮತದಾನವನ್ನು ಮಾಡಿಸಲಾಗಿದೆ.
ನೋಂದಣಿಯಾದವರಲ್ಲಿ 72 ಜನರು ಸಾವು
ಅಂಚೆ ಮತದಾನಕ್ಕೆ ಜಿಲ್ಲೆಯಲ್ಲಿ 4118 ಮತದಾರರು ನೋಂದಣಿ ಮಾಡಿಕೊಂಡಿದ್ದರು. ಎರಡು ದಿನದಲ್ಲಿ 3,807 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇನ್ನು 239 ಜನರು ಅಧಿಕಾರಿಗಳ ಮನೆಗೆ ಹೋದ ಸಮಯದಲ್ಲಿ ಇಲ್ಲದ ಕಾರಣ ಮಂಗಳವಾರ ಹೋಗಿ ಉಳಿದವರಿಂದ ಮತ ಹಾಕಿಸುವ ಪ್ರಕ್ರಿಯೆ ನಡೆಯಲಿದೆ. ನೋಂದಣಿ ಮಾಡಿಕೊಂಡಿದ್ದವರಲ್ಲಿ 72 ಮಂದಿ ಮೃತಪಟ್ಟಿದ್ದಾರೆ.
ಮತದಾನ ಪ್ರಕ್ರಿಯೆ
ಅಂಚೆ ಮತದಾನಕ್ಕೆ ಮೊದಲೇ ನೋಂದಣಿ ಆಗಿರಬೇಕು. ನಂತರ ಅವರಿಗೆ ಬ್ಯಾಲೆಟ್ ಪೇಪರ್‌ಗಳನ್ನು ವಿತರಿಸಿದ ದಿನವೇ ಅವರಿಂದ ಗುಪ್ತವಾಗಿ ಮತದಾನ ಮಾಡಿಸಲಾಗುವುದು. ಈ ಮತದಾನ ಮಾಡಿಸಲು ಇಬ್ಬರು ಮತಗಟ್ಟೆ ಅಧಿಕಾರಿಗಳು, ಓರ್ವ ಪೊಲೀಸ್ ಮತ್ತು ವಿಡಿಯೋ ಗ್ರಾಫರ್ ಸೇರಿದಂತೆ 5 ಜನರ ತಂಡ ಮತದಾನ ಮಾಡುವ ವ್ಯಕ್ತಿ ಮನೆಗೆ ತೆರಳುತ್ತದೆ. ಇವರ ಜತೆ ಅಭ್ಯರ್ಥಿಗಳ ಪರವಾಗಿ ಒಬ್ಬರು ಆಗಮಿಸಬಹುದಾಗಿದೆ.