ಸಿರಗುಪ್ಪ: ಶರಣೆಯರು ವಚನಗಳ ಮೂಲಕ ಅನಿಷ್ಟ ಪದ್ಧತಿಗಳನ್ನು ಟೀಕಿಸುವುದರೊಂದಿಗೆ ಆಧ್ಯಾತ್ಮಿಕ ಚಿಂತನೆಗಳನ್ನು ಮಂಡಿಸಿದ್ದಾರೆ ಎಂದು ಬಸವ ಬಳಗದ ವೆಂಕಟಾಪುರ ಬಸವರಾಜಪ್ಪ ಶರಣರು ಹೇಳಿದರು.
ಪಟ್ಟಣದ ಉಚ್ಚೇಶ್ವರ ಮಠದಲ್ಲಿ ಬಸವ ಬಳಗ ಟ್ರಸ್ಟ್, ಅಕ್ಕನ ಬಳಗ ಸಹಯೋಗದಲ್ಲಿ ಆಯೋಜಿಸಿದ್ದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಮಾತನಾಡಿದರು. ವಚನಗಳನ್ನು ಜನಸಾಮಾನ್ಯರಿಗೆ ಅರ್ಥೈಸಿ ಮನೆಯಿಂದ ಮನೆಗೆ, ಮನದಿಂದ ಮನಕ್ಕೆ ಸಂಸ್ಕೃತಿಯ ಸಿಂಚನ ಉಣಬಡಿಸಿದಾಗ ಸಂಸ್ಕೃತಿ ಮುಂದುವರಿಸಲು ಸಾಧ್ಯ ಎಂದರು.
ಅಕ್ಕಮಹಾದೇವಿ, ಗಂಗಮ್ಮ, ಲಕ್ಷ್ಮಮ್ಮ, ಕಾಳವ್ವ ಹಾಗೂ ಲಕ್ಕವ್ವ ಅವರಂಥ ಅನೇಕ ಶರಣೆಯರ ವಚನಗಳ ಮೂಲಕ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದಾಗ ಅರಿವಿನ ಜ್ಞಾನ ಹೆಚ್ಚುತ್ತದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ದೊರೆಯುತ್ತದೆ. ಶರಣರು ಲಿಂಗ, ಜಾತಿ ಭೇದ ತೊಡೆದು ಹಾಕುವ ಮೂಲಕ ಮಹಿಳೆಯರ ಬದುಕಿಗೆ ಹೊಸ ಆಯಾಮ ನೀಡಿದ್ದಾರೆ. ಮನೆ ಮನವೂ ಅನುಭವ ಮಂಟಪವಾಗಬೇಕು ಎಂಬ ಸಂಕಲ್ಪ ನಮ್ಮದಾಗಿದೆ ಎಂದು ತಿಳಿಸಿದರು.
ಗಜಿಗನಾಳು ವೀರೇಶ ಶಾಸ್ತ್ರಿ ಪ್ರವಚನ ನೀಡಿದರು. ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಸುಳುವಾಯಿ ಮಲ್ಲಿಕಾರ್ಜುನ, ಮುಖಂಡರಾದ ಕೆ.ವೆಂಕಟರಾಮ ರೆಡ್ಡಿ, ಹುಚ್ಚೀರಪ್ಪ, ರೌಡೂರ ಬಸವ, ತಿಪ್ಪೇಶ, ಶ್ರೀನಿವಾಸ, ಎರ‌್ರೆಪ್ಪ, ಕೆ.ಬಸವ, ಎಂ.ಕೃಷ್ಣ ಇದ್ದರು.