ಜಿಲ್ಲೆ

ಮನೆ ಮಕ್ಕಳು ತಪ್ಪು ಮಾಡಿದಾಗ ಕ್ಷಮಿಸಿ ಮುನ್ನಡೆಸಿ:ಸಂಸದ ಪ್ರಜ್ವಲ್ ರೇವಣ್ಣ ಪರ ಎಚ್‌ಡಿಕೆ ಪ್ರಚಾರ

ಹಾಸನ: ತಿಂಗಳ ಹಿಂದೆಯೇ ಶ್ರೀರಾಮನಕಟ್ಟೆಯಲ್ಲಿ ಎಚ್.ಡಿ. ದೇವೆಗೌಡರು ನಡೆಸಿದ ಮೊದಲ ಕಾರ್ಯಕರ್ತರ ಸಭೆಯಲ್ಲಿ ಪ್ರಜ್ವಲ್ ರೇವಣ್ಣ ಅವರೇ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಈಗ ಮತ್ತೊಮ್ಮೆ ನಾನು ಹೇಳಬೇಕಿಲ್ಲ. ನಿಮ್ಮ ಮನೆಯ ಮಗನ ತಪ್ಪುಗಳನ್ನು ಕ್ಷಮಿಸಿ ಆತನನ್ನು ಗೆಲ್ಲಿಸಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮನವಿ ಮಾಡಿದರು.
ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಕೈ ಜೋಡಿಸಿ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ನೀವು ಬೆಳೆಸಿದ ಮಕ್ಕಳು ನಾವು. ನಿಮ್ಮ ಮನೆಯ ಮಕ್ಕಳು ದಾರಿ ತಪ್ಪಿದಾಗ ತಿದ್ದಿಕೊಳ್ಳಲು ಅವಕಾಶ ಮಾಡಿಕೊಡುವುದಿಲ್ಲವೇ? ಮನುಷ್ಯ ಅಂದರೆ ತಪ್ಪು ಮಾಡುತ್ತಾನೆ. ಪ್ರಜ್ವಲ್ ಚಿಕ್ಕ ಹುಡುಗ. ಕೆಲವೊಂದು ತಪ್ಪುಗಳನ್ನು ಮಾಡಿದ್ದಾನೆ. ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಅವನನ್ನು ಕ್ಷಮಿಸಿ, ಗೆಲ್ಲಿಸಿಕೊಡಿ. ಮುಂದೆ ತನ್ನ ತಪ್ಪನ್ನು ತಿದ್ದಿಕೊಂಡು ಹೋಗಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡರು.
ಸಾಮಾನ್ಯ ರೈತನ ಮಗನಾಗಿ ಹುಟ್ಟಿ ಪ್ರಧಾನಿ ಸ್ಥಾನ ಅಲಂಕರಿಸಿದ ದೇವೇಗೌಡರು ಎಂದಿಗೂ ಜಿಲ್ಲೆಯ ಜನರನ್ನು ಕೈಬಿಟ್ಟಿಲ್ಲ. 91ರ ವಯಸ್ಸಿನಲ್ಲಿಯೂ ರಾಜ್ಯಸಭೆಯಲ್ಲಿ ನೀರಾವರಿ ವಿಷಯಗಳ ಬಗ್ಗೆ ರೈತರ ಬಗ್ಗೆ ಚರ್ಚೆ ಮಾಡುತ್ತಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಚ್.ಡಿ. ದೇವೇಗೌಡ ಹಾಗು ಎಚ್.ಡಿ. ರೇವಣ್ಣ ನೀಡಿರುವ ಕೊಡುಗೆ ಅಪಾರ. ಈ ರಾಜ್ಯದಲ್ಲಿ ರೇವಣ್ಣನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ವ್ಯಕ್ತಿ ಮತ್ತೊಬ್ಬರಿಲ್ಲ. ಜಿಲ್ಲೆಯ ಅಭಿವೃದ್ಧಿ ರೇವಣ್ಣ ಪಟ್ಟಿರುವ ಶ್ರಮ ನನಗೆ ಗೊತ್ತು. ರೇವಣ್ಣ ನಿಜವಾಗಿಯೂ ದುಡಿದಿದ್ದಾನೆ. ಆತನ ದುಡಿಮೆ ಬೆಲೆ ಕೊಟ್ಟು ಈ ಬಾರಿ ಜೆಡಿಎಸ್ ಪರವಾಗಿ ಮತ ಚಲಾಯಿಸಿ ಎಂದು ಹೇಳಿದರು.
ಕಳೆದ ಬಾರಿಯ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದೆವು. ಮಂಡ್ಯದಲ್ಲಿ ನನಗೆ ಇಷ್ಟವಿಲ್ಲದಿದ್ದರೂ ಒತ್ತಡಕ್ಕೆ ಮಣಿದು ನಿಖಿಲ್‌ನನ್ನು ನಿಲ್ಲಿಸಿದೆ. ಎಂಟು ಜನ ಶಾಸಕರು ನಮ್ಮವರೇ ಇದ್ದರು. ಆದರೂ ನಮಗೆ ಸೋಲಾಯಿತು. ಈ ಸೋಲಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಆರೋಪಿಸಿ ಮೈಸೂರಿನ ಯಾವುದೊ ಒಂದು ಹಳ್ಳಿಗೆ ಮೌನ್ನೆ ಸಿಎಂ ಸಿದ್ದರಾಮಯ್ಯ ಅವರ ಮಗ ಹೋದಾಗ ಅವರನ್ನು ಊರೊಳಗೆ ಬಿಟ್ಟಿಲ್ಲ. ನೀವು ನಮ್ಮ ಊರಿಗೆ ಯಾವುದೇ ಕೆಲಸ ಮಾಡಿಲ್ಲ. ನಮ್ಮ ಊರಿಗೆ ಬರಬೇಡಿ ಎಂದು ಅವರದೇ ಸಮುದಾಯದ ಜನರು ಬಹಿಷ್ಕಾರ ಹಾಕಿದ್ದಾರೆ. ನಮ್ಮ ಜಿಲ್ಲೆಯಲ್ಲಿ ನಮ್ಮನ್ನು ಯಾರೂ ಬಹಿಷ್ಕರಿಸುವುದಿಲ್ಲ. ಏಕೆಂದರೆ ನಾವು ಪ್ರತಿ ಗ್ರಾಮದ ಅಭಿವೃದ್ಧಿಗೂ ಒತ್ತು ನೀಡಿದ್ದೇವೆ.

ರಾಜ್ಯ ಸರ್ಕಾರದ ವಿರುದ್ಧ ಪ್ರಹಾರ
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಸಮೀಪಿಸುತ್ತಿದೆ. ಈ ಒಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ 1 ಲಕ್ಷದ 5 ಸಾವಿರ ಕೋಟಿ ರೂ. ಸಾಲ ಮಾಡಿದೆ. ಚುನಾವಣೆ ಆರಂಭಕ್ಕೂ ಮುನ್ನವೇ ಪ್ರತಿದಿನ ಪ್ರತಿ ಜಿಲ್ಲೆಗಳಲ್ಲಿ ಗ್ಯಾರಂಟಿ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ನೂರಾರು ಕೋಟಿ ರೂ. ಖರ್ಚು ಮಾಡುತ್ತಿದ್ದಾರೆ. ಮೌನ್ನೆ ಹಾಸನದಲ್ಲೂ ಇದೇ ರೀತಿ ಸಮಾವೇಶ ಮಾಡಿ, ‘ನಿಮ್ಮ ಕೂಗು ಹೊಳೆನರಸೀಪುರಕ್ಕೆ ತಲಪಬೇಕು,’ ಎಂದು ಹೇಳುತ್ತಾರೆ. ಈಗ ನಾನು ಹೇಳುತ್ತಿದ್ದೇನೆ ನೀವು ಇಲ್ಲಿ ಮಾಡುವ ಸದ್ದು ಕನಕಪುರಕ್ಕೆ ಕೇಳಿಸಬೇಕು ಎಂದು ಹೇಳುವ ಮೂಲಕ ಡಿಕೆಶಿಗೆ ತಿರುಗೇಟು ನೀಡಿದರು.
ಐದು ಗ್ಯಾರಂಟಿಗಳನ್ನು ಕೊಡುವ ಮೂಲಕ ಜನರನ್ನು ಭಿಕ್ಷುಕರನ್ನಾಗಿ ಮಾಡುತ್ತಿದ್ದಾರೆ. ಇದರ ಬದಲು ಜನರೇ ಕೈ ಎತ್ತಿ ನೀಡುವಂತೆ ಮಾಡಿ. ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ರೂ. ಇಟ್ಟಿದ್ದೇವೆ ಎನ್ನುತ್ತಾರೆ. ನಾನು 2018ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ರೈತರ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ. ಜನರು ಕಟ್ಟುವ ತೆರಿಗೆ ಹಣವನ್ನು ನಾನು ಜನರಿಗೆ ನೀಡಿದೆ. ಅದಕ್ಕಾಗಿ ನಾನು ಕೇಂದ್ರದಿಂದ ಯಾವ ಹಣವೂ ಬರಲಿಲ್ಲ ಎಂದು ದೂರುತ್ತಾ ಕೂರಲಿಲ್ಲ. ಪ್ರತಿಯೊಂದಕ್ಕೂ ಕೇಂದ್ರದ ಕಡೆ ಬೊಟ್ಟು ಮಾಡುವ ಇವರು ಇವರ ಖಜಾನೆಯಿಂದಲೇ ತೆಗೆದು ಜನರಿಗೆ ಕೊಡಲಿ. ಕೊಬ್ಬರಿ ಬೆಳೆಗಾರರಿಗೆ 15 ಸಾವಿರ ನೀಡಲಿ. ನಾನಾಗಿದ್ದರೆ ನಿಂತ ಸ್ಥಳದಲ್ಲೇ ಈ ಆದೇಶ ಮಾಡುತ್ತಿದ್ದೆ ಎಂದು ಸವಾಲು ಹಾಕಿದರು.
ಪಕ್ಷದ ಅಸ್ತಿತ್ವಕ್ಕಾಗಿ ಬಿಜೆಪಿ ಜತೆ ಮೈತ್ರಿ
ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕೊನೆಗಾಲದಲ್ಲಿ ಮಕ್ಕಳು ದೇವೇಗೌಡರ ಕಣ್ಣಲ್ಲಿ ನೀರು ಹಾಕುವಂತೆ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ, ಪಕ್ಷದ ಉಳಿವಿಗಾಗಿ ನಾವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಈಗ ಪಾತಾಳಕ್ಕೆ ಕುಸಿದಿದ್ದೇವೆ. ಮತ್ತೆ ಮೇಲೆ ಏಳಲು ಆಧಾರ ಬೇಕಲ್ಲ. ಹೀಗಾಗಿ ಮೈತ್ರಿ ನಮಗೆ ಅನಿವಾರ್ಯವಾಗಿದೆ. ನಮ್ಮನ್ನು ಚೆನ್ನಾಗಿ ನಡೆಸಿಕೊಳ್ಳುವವರ ಜತೆ ನಾವು ಚೆನ್ನಾಗಿ ಇರುತ್ತೇವೆ. ಈ ಚುನಾವಣೆಯಲ್ಲಿ ನಮಗೆ ಹಾಸನ, ಮಂಡ್ಯ, ಕೋಲಾರ ಸಿಗಲಿದೆ. ಇನ್ನು ಹೆಚ್ಚಿನ ಕ್ಷೇತ್ರ ಸಿಕ್ಕರೂ ಸಿಗಬಹುದು. ಬಿಜೆಪಿಗೂ ಸಹ ರಾಜ್ಯದೆಲ್ಲೆಡೆ ಜೆಡಿಎಸ್ ಕಾರ್ಯಕರ್ತರ ಪಡೆ ದೊಡ್ಡ ಶಕ್ತಿಯಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಡಾ. ಸಿ.ಎನ್. ಮಂಜುನಾಥ ಅವರು ರಾಜಕೀಯಕ್ಕೆ ಬರಲು ನನಗಾಗಲಿ ನಮ್ಮ ಕುಟುಂಬಕ್ಕೆ ಸುತಾರಾಂ ಇಷ್ಟವಿಲ್ಲ. ದೇವೇಗೌಡರು ಹಾಸನದಲ್ಲಿ ಈ ಹಿಂದೆಯೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದರು. ಆದರೆ ಬಿಜೆಪಿ ಹೈಕಮಾಂಡ್ ನನ್ನ ಮೇಲೆ ಒತ್ತಡ ತಂದಿತು. ನಿಮ್ಮ ಭಾವ ಅವರನ್ನು ಹೇಗಾದರೂ ಮಾಡಿ ಒಪ್ಪಿಸಿ. ನಮಗೆ ಅವರು ಬೇಕೇ ಬೇಕು ಎಂದು ಹಠ ಹಿಡಿದ ಕಾರಣ ನಾನು ಅವರ ಮನವೊಲಿಸಬೇಕಾಯಿತು ಎಂದು ಎಚ್‌ಡಿಕೆ ಹೇಳಿದರು.

21ರಂದು ಹೃದಯ ಶಸ್ತ್ರಚಿಕಿತ್ಸೆ
ನಾನು ಅಷ್ಟು ಬೇಗನೆ ಸಾಯುವುದಿಲ್ಲ. ನಿಮ್ಮ ಋಣ ತೀರಿಸಿಯೇ ನಾನು ಮಣ್ಣಿಗೆ ಹೋಗುವುದು. ನನಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ. ಈಗಾಗಲೇ ಎರಡು ಬಾರಿ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪಂಚರತ್ನ ಯಾತ್ರೆಯಲ್ಲಿ ಸತತ 90 ದಿನ ನಿದ್ದೆ, ಊಟಾಹಾರಗಳನ್ನು ತ್ಯಜಿಸಿ ಹಗಲಿರುಳು ಪ್ರವಾಸ ಮಾಡಿದೆ. ಜನರು ಸಾಗರದಂತೆ ಸೇರುತ್ತಿದ್ದರು. ಆದರೆ, ಯಾರ ಕಣ್ಣು ಬಿತ್ತೊ ಗೊತ್ತಿಲ್ಲ. ನಮಗೆ ಸೋಲಾಯಿತು. ಈ ಎಲ್ಲದರಿಂದ ನನ್ನ ಹೃದಯಕ್ಕೆ ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮಾಡಬೇಕಿದೆ. 21ರಂದು ಚೆನ್ನೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದೇನೆ. ಅಮೆರಿಕದಿಂದ ವೈದ್ಯರ ತಂಡ ಬರುತ್ತಿದೆ. ಆಪರೇಷನ್ ಬಳಿಕ ಮೂರು ದಿನ ವಿಶ್ರಾಂತಿ ಪಡೆದು ಮತ್ತೆ ಚುನಾವಣಾ ಪ್ರಚಾರ ಆರಂಭಿಸುತ್ತೇನೆ ಎಂದರು.