ಮುಧೋಳದಲ್ಲಿ ಸಂಕ್ರಾಂತಿ ವಿಶೇಷ ಖಾದ್ಯಗಳ ವೈಭವ. 
ಜಿಲ್ಲೆ

ಮನೆ-ಮಂದಿರಗಳಲ್ಲಿ ಸಂಕ್ರಾಂತಿ ಸಂಭ್ರಮ

ಬಾಗಲಕೋಟೆ: ಮಕರ ಸಂಕ್ರಾಂತಿ ಹಬ್ಬವನ್ನು ಜಿಲ್ಲೆಯಾದ್ಯಂತ ಪುಣ್ಯಕ್ಷೇತ್ರ ಮಂದಿರ, ಮನೆ ಮನೆಗಳಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಮಂಗಳವಾರ ಜಿಲ್ಲೆಯ ಪುಣ್ಯಕ್ಷೇತ್ರಗಳಿಗೆ ಭಕ್ತರ ದಂಡು ಹರಿದು ಬಂದಿತ್ತು.

ಸಂಕ್ರಾಂತಿ ಅಂಗವಾಗಿ ಜಿಲ್ಲೆಯ ಪುಣ್ಯಕ್ಷೇತ್ರಗಳಾದ ಬಸವಣ್ಣನ ಐಕ್ಯಸ್ಥಳ, ತ್ರಿವಳಿ ನದಿಗಳ ಸಂಗ್ರಮ ಕೂಡಲಸಂಗಮ, ಘಟಪ್ರಭಾ, ಕೃಷ್ಣಾ ನದಿಗಳ ಸಂಗಮ ಬೀಳಗಿ ತಾಲೂಕಿನ ಚಿಕ್ಕಸಂಗಮನಾಥ ದೇವಾಲಯ ಹಾಗೂ ಬಾದಾಮಿ ತಾಲೂಕಿನ ಮಹಾಕೂಟದ ಪುಷ್ಕರಣಿಯಲ್ಲಿ ಪವಿತ್ರ ಸ್ನಾನಕ್ಕಾಗಿ ವಿವಿಧೆಡೆ ಅಪಾರ ಸಂಖ್ಯೆ ಭಕ್ತರು ಆಗಮಿಸಿ ಪುಣ್ಯ ಸ್ನಾನ ಮಾಡಿದರು. ಅಲ್ಲದೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಡಿಗೆ ಮಳೆ, ಬೆಳೆ ಉತ್ತಮವಾಗಿ ದೊರೆಯಲಿ ಎಂದು ಪ್ರಾರ್ಥಿಸಲಾಯಿತು.

ಮುಂಜಾಗೃತ ಕ್ರಮವಾಗಿ ನದಿ ತೀರದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ ಕೈಗೊಳ್ಳಲಾಗಿತ್ತು. ಅನೇಕ ಭಾಗದಲ್ಲಿ ಸಹ ಬೋಜನ ಕೂಟ ನಡೆದವು. ಸ್ನೇಹಿತರು, ಸಂಬಂಧಿಕರು ಸಜ್ಜೆ, ಜೋಳದ ರೊಟ್ಟಿ, ಹೊಳಿಗೆ, ಶೆಂಗಾ ಹೊಳಿಗೆ, ಚಪಾತಿ, ಬದನೆಕಾಯಿ ತುಂಬು, ಕೆನೆ ಮೊಸರು ಜವಾರಿ ಖಾದ್ಯಗಳನ್ನು ಸವಿದರು. ಆತ್ಮೀಯರಿಗೆ, ಸ್ನೇಹಿತರಿಗೆ, ಸಂಬಂಧಿಕರಿಗೆ ಏಳ್ಳ, ಬೆಲ್ಲ ಹಾಗೂ ಕುಸರೆಳ್ಳು ಕೊಟ್ಟು ಶುಭಾಶಯ ವಿನಿಮಯ ಮಾಡಿಕೊಂಡರು.