ಜಿಲ್ಲೆ

ಮನೆ, ಬೆಳೆಹಾನಿ ವರದಿ ಸಲ್ಲಿಸಲು ಸೂಚನೆ

ಧಾರವಾಡ: ಕೆಲ ದಿನಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ಅತಿ ಹೆಚ್ಚು ಮಳೆಯಿಂದ ಗ್ರಾಮ ಮತ್ತು ನಗರ ವ್ಯಾಪ್ತಿಯಲ್ಲಿ ಸುಮಾರು 250ಕ್ಕೂ ಮನೆಗಳಿಗೆ ಹಾಗೂ 12,857 ಹೆ. ಪ್ರದೇಶದ ಬೆಳೆ ಹಾನಿಯಾಗಿದ್ದು, ಈ ಕುರಿತ ಸಮೀಕ್ಷಾ ವರದಿಯನ್ನು ಅಧಿಕಾರಿಗಳು ಶೀಘ್ರ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅತಿವೃಷ್ಟಿ ಹಾನಿ ಕುರಿತು ಗುರುವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಅಪಾರ ಮಳೆಯಿಂದ ವಿವಿಧ ಇಲಾಖೆಗಳಿಗೆ ಸೇರಿರುವ ಕಟ್ಟಡ, ರಸ್ತೆ, ಸೇತುವೆಗಳು ಮತ್ತು ರೈತರ ಬೆಳೆ, ಮನೆಗಳು ಹಾನಿಯಾಗಿವೆ. ಇಲಾಖೆ ಮುಖ್ಯಸ್ಥರು ಹಾನಿ ವಿವಿರಗಳನ್ನು ಪರಿಶೀಲಿಸಿ ತಕ್ಷಣ ವರದಿ ಸಲ್ಲಿಸಬೇಕು. ಸರ್ಕಾರ ಅತಿವೃಷ್ಟಿ ಪರಿಹಾರಕ್ಕಾಗಿ ಜಿಲ್ಲಾಡಳಿತಕ್ಕೆ ಈಗಾಗಲೇ 5 ಕೋಟಿ ರೂ.ಬಿಡುಗಡೆ ಮಾಡಿದೆ. ಅಧಿಕಾರಿಗಳು ವಿವರವಾದ ವರದಿ ಸಲ್ಲಿಸಿದ ನಂತರ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಹಿಂದಿನ ವರ್ಷ ಹಾನಿಯಾದ ಮನೆಗಳ ಪುನರ್ ನಿರ್ವಣಕ್ಕೆ ವರ್ಗೀಕರಣದ ಅನುಗುಣ ಪರಿಹಾರ ಬಿಡುಗಡೆಯಾಗಲಿದೆ. ಕಾಲಮಿತಿಯಲ್ಲಿ ಮನೆ ನಿರ್ವಣವಾದರೆ ಪೂರ್ಣ ನೆರವು ದೊರೆಯುತ್ತದೆ. ಅಧಿಕಾರಿಗಳು ಹಾನಿಯಾದ ಮನೆಗಳ ಪುನರ್ ನಿರ್ಮಾಣ ಹಾಗೂ ದುರಸ್ತಿ ಕಾರ್ಯವನ್ನು ಖುದ್ದು ಪರಿಶೀಲಿಸಿ, ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ಆಗಸ್ಟ್ ತಿಂಗಳ ಮಳೆಯಿಂದ ಒಂದು ಜೀವ ಹಾನಿಯಾಗಿದ್ದು, 5 ಲಕ್ಷ ರೂ.ಪರಿಹಾರ ವಿತರಿಸಲಾಗಿದೆ. 4 ಸಣ್ಣ ಹಾಗೂ 9 ದೊಡ್ಡ ಜಾನುವಾರುಗಳ ಹಾನಿಯಾಗಿದ್ದು, ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ. ತುಪ್ಪರಿ ಹಾಗೂ ಬೆಣ್ಣೆ ಹಳ್ಳದ ಪ್ರವಾಹ, ಮಳೆಯಿಂದ ಜಿಲ್ಲೆಯ ಸುಮಾರು 12857 ಹೆ. ಬೆಳೆ ಹಾನಿಯಾಗಿದ್ದು, ಕೃಷಿ, ತೋಟಗಾರಿಕೆ, ರೇ?್ಮೆ, ಸಾಂಖ್ಯಿಕ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಆರಂಭಿಸಿದ್ದಾರೆ ಎಂದರು.

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಲ್ಲಿ ಈಗಾಗಲೇ ನೋಂದಾಯಿತ ರೈತರ ಬೆಳೆಹಾನಿ ಪರಿಹಾರ ನೀಡಲು ಕ್ರಮಕೈಗೊಳ್ಳಲಾಗಿದೆ. ವಿಮಾ ಕಂಪನಿ ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ಮಾಡಲಿದ್ದಾರೆ ಎಂದರು.

ಜಿ.ಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಮನೆ ಹಾನಿ ಕುರಿತ ವರದಿ ಹಾಗೂ ಮನೆ ಪುನರ್ ನಿರ್ವಣ, ದುರಸ್ತಿ ಪರಿಶೀಲಿಸಲು ಪಿಡಿಒಗಳೊಂದಿಗೆ ಪ್ರತಿ ಗ್ರಾಮಕ್ಕೆ ಓರ್ವ ನೋಡಲ್ ಅಧಿಕಾರಿ ನೇಮಿಸಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಲೋಕೋಪಯೋಗಿ, ಸಣ್ಣ ನೀರಾವರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್, ರಾಷ್ಟ್ರೀಯ ಹೆದ್ದಾರಿ, ಕೃಷಿ, ತೋಟಗಾರಿಕೆ, ಹೆಸ್ಕಾಂ, ಮಹಾನಗರ ಪಾಲಿಕೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ವರದಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕ ಕಟಿಯಾರ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಐ.ಬಿ., ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.