ಜಿಲ್ಲೆ

ಮನೆ ಬೀಗ ಒಡೆದು 200 ಗ್ರಾಂ ಚಿನ್ನ ಕದ್ದೊಯ್ದ ಖದೀಮರು

ಹಾಸನ: ತಣ್ಣೀರು ಹಳ್ಳದ ದೊಡ್ಡಮಂಡಿಗನಹಳ್ಳಿ ಬಳಿ ಇರುವ ಸುಭಾಷ್ ನಗರದ ಮನೆ ಒಂದರಲ್ಲಿ ಹಿಂಭಾಗದ ಬೀಗ ಒಡೆದು 200 ಗ್ರಾಂ ಚಿನ್ನ ಹಾಗೂ ನಾಲ್ಕು ಸಾವಿರ ನಗದನ್ನು ದೋಚಿ ಕಳ್ಳರು ಪರಾರಿಯಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಮನೆಯಲ್ಲಿ ಯಾರು ಇಲ್ಲದಿದ್ದನ್ನು ಗಮನಿಸಿರುವ ಕಳ್ಳರು ಹಿಂಬಾಗಿಲಿನ ಬೀಗ ಒಡೆದು ಮನೆಯೊಳಗೆ ನುಗ್ಗಿ ಬೀರುವಿನಲ್ಲಿ ಇಟ್ಟಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿದ್ದಾರೆ. ಗೌಸ್ಕಾನ್ ಹಾಗೂ ಹಸೀನಾ ಬಾನು ಎಂಬುವರಿಗೆ ಸೇರಿದ ಮನೆ ಇದಾಗಿದ್ದು ಇಬ್ಬರು ದಂಪತಿಗಳು ತುಮಕೂರಿನ ಕೆಇಬಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತುಮಕೂರಿನಲ್ಲಿ ವಾಸಿಸುತ್ತಿರುವ ದಂಪತಿ ಹಾಸನದ ಮನೆಗೆ ಬೇಗ ಹಾಕಿಕೊಂಡು ಹೋಗಿದ್ದರು. ಇದನ್ನು ಗಮನಿಸಿರುವ ಕಳ್ಳರು ರಾತ್ರಿ ವೇಳೆ ಮನೆಗೆ ನುಗ್ಗಿ ಕಳ್ಳತನ ಮಾಡಿರುವುದಲ್ಲದೆ ಮನೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ರಿಸಿವರ್‌ಗಳನ್ನೂ ಕೂಡ ಕದ್ದೊಯ್ದಿದ್ದಾರೆ.
ಮನೆ ಕಳ್ಳತನ ಸಂಬಂಧ ಹಸಿನಾ ಬಾನು ತಂದೆ ಅಬ್ದುಲ್ಲಾ ಅವರು ಮಾತನಾಡಿ, ಇದು ನನ್ನ ಮಗಳ ಮನೆಯಾಗಿದ್ದು, ತನ್ನ ಮಗಳು ಹಾಗೂ ಅಳಿಯ ಕೆಲಸದ ನಿಮಿತ್ತ ತುಮಕೂರಿನಲ್ಲಿ ವಾಸವಿದ್ದು ಹಾಸನದಲ್ಲಿರುವ ಈ ಮನೆಗೆ ಬೀಗ ಹಾಕಿದ್ದಾರೆ. ನಾನು ಮಂಗಳವಾರ ಮನೆ ನೋಡಿಕೊಂಡು ಬರಲು ಮನೆ ಬಳಿಗೆ ಬಂದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ. ಕಳ್ಳರು ಮನೆಯ ಹಿಂದಿನ ಬಾಗಿಲಿನಿಂದ ಬಂದು ನನ್ನ ಮಗಳಿಗೆ ಸೇರಿದ ಒಡವೆ ಹಾಗೂ ಹಣವನ್ನು ದೋಚಿಕೊಂಡು ಹೋಗಿದ್ದಾರೆ. ದಯಮಾಡಿ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿ ತನ್ನ ಮಗಳ ಒಡವೆ ಹಾಗೂ ಹಣವನ್ನು ವಾಪಸ್ ಕೊಡಿಸಬೇಕು ಎಂದು ಕ್ರಮ ವಹಿಸಬೇಕು,’ ಎಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.