ಬೆಂಗಳೂರು ಗ್ರಾಮಾಂತರ: ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ. ಮುಖ್ಯವಾಗಿ ಕರೊನಾ ಲಸಿಕೆ ವಿತರಣೆ ಕಾರ್ಯ ಚುರುಕುಗೊಳಿಸಲಾಗಿದೆ ಎಂದು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.
ದೇವನಹಳ್ಳಿ ತಾಲೂಕು ಬೀರಸಂದ್ರದಲ್ಲಿನ ಜಿಲ್ಲಾಡಳಿತ ಭವನ ಆವರಣದಲ್ಲಿ ಲಸಿಕೆ ವಿತರಣೆಗೆ ಸಾರ್ವಜನಿಕರನ್ನು ಕರೆತರುವ ಬಸ್‌ಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು. ಲಸಿಕಾ ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ವಿತರಿಸಲಾಗುತ್ತದೆ. ಕೆಲವೆಡೆ ಸಾರ್ವಜನಿಕರು ಸಾರಿಗೆ ವ್ಯವಸ್ಥೆ ಹಾಗೂ ಕರೊನಾ ಕಾರಣದಿಂದ ಲಸಿಕಾ ಕೇಂದ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್ ಮಾತನಾಡಿ, ಸಿಎಸ್‌ಆರ್ ನಿಧಿ ಬಳಕೆ ಮಾಡಿಕೊಂಡು ಲಸಿಕಾ ಕೇಂದ್ರಗಳಿಗೆ ಸಾರ್ವಜನಿಕರನ್ನು ಕರೆತರಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಇಂದು ಇದಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯತೆಗೆ ಅನುಗುಣವಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು. ದೊಡ್ಡಬಳ್ಳಾಪುರ ಕೈಗಾರಿಕಾ ಸಂಘ ಪ್ರಥಮವಾಗಿ ಇದಕ್ಕೆ ಸಹಕಾರ ನೀಡಿದೆ ಎಂದರು.
ಆತಂಕ ಬೇಡ: ಸಾರ್ವಜನಿಕರನ್ನು ಲಸಿಕಾ ಕೇಂದ್ರಗಳಿಗೆ ಕರೆತರುವ ಬಸ್‌ಗಳನ್ನು ಸ್ಯಾನಿಟೈಸೇಷನ್ ಮಾಡಲಾಗುವುದು, ಮಾಸ್ಕ್ ಕಡ್ಡಾಯದ ಜತೆಗೆ ಶೇ.50 ಮಂದಿ ಪ್ರಯಾಣಿಸಲು ಅವಕಾಶವಿದೆ. ಕರೊನಾ ನಿಯಮ ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ ಎಂದು ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ. ನಾಯಕ್ ತಿಳಿಸಿದರು.