ಜಿಲ್ಲೆ

ಮನೆ ಬಾಗಿಲಿಗೆ ಪಿಂಚಣಿ ಅಭಿಯಾನ

ಬೀದರ್: ಜಿಲ್ಲಾದ್ಯಂತ ಜ.31ರವರೆಗೆ ಪಿಂಚಣಿ ಮಂಜೂರಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬಡ ಕುಟುಂಬಗಳಿಗೆ ಸಹಾಯ ಧನ ನೀಡುವ ಕಾರ್ಯ ವೇಗವಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ಎಲ್ಲ ತಹಸೀಲ್ದಾರರಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲ ತಾಲೂಕುಗಳ ತಹಸೀಲ್ದಾರ್ ಅವರೊಂದಿಗೆ ಬುಧವಾರ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಡಿಸಿ ಅವರು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಗಳ ಅನುಷ್ಠಾನ ಸಮರ್ಪಕವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ವೃದ್ಯಾಪ್ಯ ವೇತನ, ಸಂಧ್ಯಾಸುರಕ್ಷಾ, ವಿಧವಾ ವೇತನ, ಮನಸ್ವಿನಿ, ವಿಕಲಚೇತನ, ಅಂತ್ಯಸಂಸ್ಕಾರ ಮತ್ತು ರಾಷ್ಟ್ರೀಯ ಕುಟುಂಬ ನೆರವು ಯೋಜನೆಗಳಿಗೆ ನೆರವು ಕೋರಿ ಸ್ವೀಕೃತಿಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಸಹಾಯಧನ ನೀಡುವ ಕಾರ್ಯ ಚುರುಕಗೊಳಿಸಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಂಬಂಧಿಸಿದ ತಹಸೀಲ್ದಾರರನ್ನೇ ಹೊಣೆಯಾಗಿಸಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿವಿಧ ಅರ್ಜಿ ವಿಲೇವಾರಿಯು ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷರ ಹಂತದಲ್ಲಿ ವಿಳಂಬವಾಗುತ್ತಿದ್ದರೆ ಅವರಿಗೆ ನೋಟಿಸ್ ಜಾರಿ ಮಾಡಬೇಕು. ಕೆ-2 ತಂತ್ರಾಂಶದಲ್ಲಿ ಹೊಸದಾಗಿ ಮಂಜೂರಾತಿ ನೀಡಿ ತಾಲೂಕು ಶಿರಸ್ತೇದಾರ ಮತ್ತು ತಹಸೀಲ್ದಾರ್ ಲಾಗಿನ್ದಲ್ಲಿ ಬಾಕಿ ಉಳಿದ ಅರ್ಜಿಗಳ ವಿಲೇವಾರಿ ಕಾರ್ಯ 31ರೊಳಗೆ ಪೂರ್ಣವಾಗಬೇಕು ಎಂದು ಡಿಸಿ ಗಡುವು ವಿಧಿಸಿದರು.

ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿರುವುದನ್ನು ಅಧಿಕಾರಿ, ಸಿಬ್ಬಂದಿ ಅರಿಯಬೇಕು. ಅರ್ಜಿಯೊಂದಿಗೆ ರೇಷನ್ ಕಾಡ್೯ ಇಲ್ಲ, ಆಧಾರ್ ಕಾಡ್೯ ಇಲ್ಲ ಎಂದು ಅರ್ಜಿದಾರರಿಗೆ ಅನಗತ್ಯ ಕಿರಿಕಿರಿ ನೀಡಿ ಅರ್ಹರ ಅರ್ಜಿ ತಿರಸ್ಕರಿಸುವುದು ಕಂಡುಬಂದರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು. ಅನುದಾನವಿಲ್ಲ, ಸಹಾಯಧನವಿಲ್ಲ ಎಂದು ವಿಳಂಬ ಮಾಡದೇ ಸುತ್ತೋಲೆಯಲ್ಲಿ ತಿಳಿಸಿದಂತೆ ಅವಶ್ಯಕ ದಾಖಲಾತಿಗಳನ್ನು ಪಡೆದು ಪರಿಶೀಲಿಸಿ ಮಾಸಾಶನ ಮಂಜೂರಿಗೆ ಕ್ರಮ ವಹಿಸಲು ತಾಕೀತು ಮಾಡಿದರು.

ಅಪರ ಡಿಸಿ ರುದ್ರೇಶ ಘಾಳಿ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ್, ಭುವನೇಶ ಪಾಟೀಲ್, ತಹಸೀಲ್ದಾರ್ ಗಂಗಾದೇವಿ ಸಿ.ಎಚ್. ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಪ್ರತಿ ತಿಂಗಳು ರೂ. 19 ಕೋಟಿ ಮಾಸಾಶನ
ಬೀದರ್ ಜಿಲ್ಲೆಯಲ್ಲಿ ಪ್ರತಿ ತಿಂಗಳು 2.14 ಲಕ್ಷ ಜನರಿಗೆ 19 ಕೋಟಿ ರೂ. ಮಾಸಾಶನ ಕೊಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಇನ್ನೂ ಅರ್ಹ ಪಲಾನುಭವಿಗಳನ್ನು ಗುರುತಿಸಿ ಪಿಂಚಣಿ ಮಂಜೂರಿ ಮಾಡುವ ಕಾರ್ಯ ಚುರುಕುಗೊಳ್ಳಬೇಕು ಎಂದು ಡಿಸಿ ರಾಮಚಂದ್ರನ್ ಹೇಳಿದರು. ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ನವೋದಯ ಮೊಬೈಲ್ ಆ್ಯಪ್ ಸಮರ್ಥ ಬಳಸಿಕೊಳ್ಳುವ ಮೂಲಕ ಮನೆ ಬಾಗಿಲಿಗೆ ಮಾಸಾಶನ ಸಂದೇಶ ಹೋಗಲು ಕ್ರಮ ವಹಿಸಬೇಕು ಎಂದು ಸೂಚಿಸಿದರು. ಮೂರು ದಿನಗಳ ವಿಶೇಷ ಅಭಿಯಾನದಲ್ಲಿ ನಾಗರಿಕರ ಆದಾಯ ಹಾಗೂ ವಯೋಮಿತಿ ಆಧರಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು. ನವೋದಯ ಆ್ಯಪ್ ಮೂಲಕ ಮನೆ ಬಾಗಿಲಲ್ಲೇ ಫಲಾನುಭವಿಗಳ ಭಾವಚಿತ್ರ ಹಾಗೂ ಮಾಹಿತಿ ಸಂಗ್ರಹಣೆ ನಡೆಸುವಂತೆ ಸೂಚಿಸಿದರು.

ಆಧಾರ್ ಜೋಡಣೆ ಚುರುಕುಗೊಳಿಸಿ
ತಾಲೂಕುವಾರು ಆಧಾರ್ ಸಂಖ್ಯೆ ಜೋಡಣೆ ಪ್ರಗತಿ ತೃಪ್ತಿದಾಯಕವಾಗಿಲ್ಲ ಎಂದು ಡಿಸಿ ರಾಮಚಂದ್ರನ್ ಅತೃಪ್ತಿ ವ್ಯಕ್ತಪಡಿಸಿದರು. ಸಾಮಾಜಿಕ ಭದ್ರತಾ ಯೋಜನೆಗಳಿಗೆ ಸಂಬಂಧಿಸಿದಂತೆ ಆಧಾರ್ ಸಂಖ್ಯೆ ಜೋಡಣೆ ಪ್ರಗತಿ ಬಗ್ಗೆ ಸಾಮಾಜಿಕ ಭದ್ರತಾ ಯೋಜನೆಗಳ ಸಹಾಯಕ ನಿರ್ದೇಶಕಿ ಪಾವನಿ ಕುಲಕರ್ಣಿ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ, ಆಧಾರ್ ಸಂಖ್ಯೆ ಜೋಡಣೆ ಬಹಳ ಸರಳ ಪ್ರಕ್ರಿಯೆ. ಎಲ್ಲ ತಹಸೀಲ್ದಾರರು ಎಸಿ ನೇತೃತ್ವದಲ್ಲಿ ಈ ಕಾರ್ಯ ನಡೆಸಬೇಕು. ಮತದಾರ ಪಟ್ಟಿಯನುಸಾರ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಮತ್ತು ಬಿಎಲ್ಓಗಳ ಸಹಕಾರ ಪಡೆದು ಪ್ರದೇಶವಾರು ಇಲ್ಲವೆ ವಾಡ್೯ವಾರು ತೀವ್ರ ರೀತಿಯಲ್ಲಿ ನಡೆಸಲು ಕ್ರಮ ವಹಿಸಲು ನಿರ್ದೇಶನ ನೀಡಿದರು. ಸ್ಕಾಲರ್ಶಿಪ್ ಸೇರಿ ಇತರ ಸೌಕರ್ಯ ಪಡೆಯಲು ಅನುಕೂಲವಾಗುವಂತೆ ವಿಶೇಷವಾಗಿ ಮಕ್ಕಳು ಸಹ ಆಧಾರ್ ಕಾಡ್೯ ಹೊಂದುವಂತೆ ನೋಡಿಕೊಳ್ಳಲು ತಿಳಿಸಿದರು.

ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಇನ್ಮುಂದೆ ಯಾವುದೇ ನೆಪ ಹೇಳಬೇಡಿ. ಜ.31ರವರೆಗೆ ಕಾಲವಕಾಶ ನೀಡುತ್ತೇವೆ. ಬರುವ ಮೂರು ದಿನಗಳ ಕಾಲ ಇದನ್ನೇ ಮೊದಲ ಆದ್ಯತೆ ಕೆಲಸವೆಂದು ಪರಿಗಣಿಸಿ, ಜಿಲ್ಲಾದ್ಯಂತ ವಿಶೇಷ ಅಭಿಯಾನ ಮಾಡಿ ಪ್ರಗತಿ ಸಾಧನೆ ತೋರಿಸಬೇಕು.ರಾಮಚಂದ್ರನ್, ಜಿಲ್ಲಾಧಿಕಾರಿ