ಗುಂಡ್ಲುಪೇಟೆ: ತಾಲೂಕಿನ ಬೇಗೂರು ಗ್ರಾಮದಲ್ಲಿ ಚರಂಡಿಗಳು ಮುಚ್ಚಿಹೋಗಿದ್ದರಿಂದ ತಗ್ಗು ಪ್ರದೇಶಗಳಲ್ಲಿ ಭಾರೀ ಪ್ರಮಾಣದ ನೀರು ನಿಂತು ಕೆಲವು ಮನೆಗಳು ಹಾಗೂ ಪೊಲೀಸ್ ವಸತಿಗೃಹಗಳು ಜಲಾವೃತವಾಗಿದ್ದವು.
ಕಳೆದ ಕೆಲವು ದಿನಗಳಿಂದ ಬೀಳುತ್ತಿರುವ ಮಳೆಯಿಂದ ಸಮೀಪದ ಕೋಟೆಕೆರೆ ಹಾಗೂ ಬೆಳಚಲವಾಡಿ ಕೆರೆಗಳು ತುಂಬಿ ಕೋಡಿಬಿದ್ದ ನೀರು ಹಾಗೂ ಜಮೀನುಗಳಿಂದ ಹೊರಬಂದ ನೀರು ಗ್ರಾಮದತ್ತ ನುಗ್ಗಿ ತಗ್ಗು ಪ್ರದೇಶಗಳು ಜಲಾವೃತವಾದವು. ಬೆಳಚಲವಾಡಿ ರಸ್ತೆ ಬದಿಯ ಕಾಲುವೆಗಳು ಹಾಗೂ ಚರಂಡಿಗಳು ಮುಚ್ಚಿಕೊಂಡಿರುವ ಪರಿಣಾಮ 6 ಮನೆಗಳು ಹಾಗೂ ಪೊಲೀಸ್ ವಸತಿ ಗೃಹ ಜಲದಿಗ್ಬಂಧನಕ್ಕೊಳಗಾದವು. ಮನೆಗಳನ್ನು ಎತ್ತರದಲ್ಲಿ ನಿರ್ಮಿಸಿದ್ದರಿಂದ ಮಳೆನೀರು ಒಳಗೆ ಪ್ರವೇಶಿಸದಿದ್ದರೂ ಮನೆಯವರು ಹೊರಬರಲಾಗದಂತಾಗಿತ್ತು.
ಕಮರಹಳ್ಳಿ ಕೆರೆ ದಂಡೆಯ ಬದಿಯಲ್ಲಿರುವ ವಿದ್ಯುತ್ ಪ್ರಸರಣಾ ಕೇಂದ್ರದ ಸುತ್ತಲೂ ನೀರು ನಿಂತು ಅಪಾಯದ ಭೀತಿಯುಂಟು ಮಾಡಿತ್ತು. ಜಲಾವೃತ ಪ್ರದೇಶಗಳ ಪ್ರವೇಶದಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳ ಸಂಚಾರ ನಿರ್ಬಂಧಿಸಲಾಯಿತು.
ಕೂಡಲೇ ಕಾರ್ಯಾಚರಣೆ ಆರಂಭಿಸಿದ ಕಂದಾಯಾಧಿಕಾರಿಗಳು ಜೆಸಿಬಿಗಳ ಮೂಲಕ ಹೊಸದಾಗಿ ಕಾಲುವೆ ನಿರ್ಮಿಸಿ ನೀರು ಹಳ್ಳದತ್ತ ಹರಿಯುವಂತೆ ಮಾಡಲಾಯಿತು. ಮಧ್ಯಾಹ್ನದ ವೇಳೆಗೆ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಸಂಜೆ ಮಳೆಬಿದ್ದರೆ ಮತ್ತೆ ಜಲಾವೃತವಾಗುವ ಭೀತಿ ಇನ್ನೂ ಕಾಡುತ್ತಿದೆ.
ರಸ್ತೆಯ ಮೇಲೆ ಹರಿದ ನೀರು, ಕಮರಹಳ್ಳಿ, ಹಾಲಹಳ್ಳಿ ಸೇರುದಂತೆ ವಿವಿಧ ಗ್ರಾಮಗಳ ತಗ್ಗು ಪ್ರದೇಶದ ರಸ್ತೆಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಜೆಸಿಬಿಯಿಂದ ಕಾಲುವೆ ನಿರ್ಮಿಸಿದ ನೀರು ಗುಂಡ್ಲು ಪಾತ್ರಕ್ಕೆ ಸೇರಿತು. ಬೇಗೂರು ಹಾಗೂ ಸೋಮಹಳ್ಳಿಯಲ್ಲಿ ತಲಾ 5 ಮನೆಗಳು ಸೇರಿದಂತೆ ಹೋಬಳಿಯಲ್ಲಿ ಸುಮಾರು 28ಕ್ಕೂ ಹೆಚ್ಚಿನ ಗೋಡೆಗಳು ನೆಲಕ್ಕುರುಳಿದ್ದರೂ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಷಯ ತಿಳಿದ ಶಾಸಕ ಸಿ.ಎಸ್. ನಿರಂಜನಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಮನೆಗಳ ಗೋಡೆ ಬಿದ್ದಿರುವ ಸಂತ್ರಸ್ತರಿಗೆ ಕೂಡಲೇ ಪರಿಹಾರ ಮತ್ತು ನೆರವು ದೊರಕಿಸಬೇಕು ಎಂದು ತಹಸೀಲ್ದಾರ್ ರವಿಶಂಕರ್, ಕಂದಾಯಾಧಿಕಾರಿ ರವಿ, ಗ್ರಾಮಲೆಕ್ಕಾಧಿಕಾರಿ ಮಹದೇವಪ್ಪ ಅವರಿಗೆ ಸೂಚಿಸಿದರು.