ಜಿಲ್ಲೆ

ಮನೆ, ನಿವೇಶನಕ್ಕಾಗಿ ಮುಂದುವರಿದ ಅಲೆಮಾರಿಗಳ ಪ್ರತಿಭಟನೆ

reportermys

ಮೈಸೂರು: ಏಕಲವ್ಯನಗರದ ನಿವಾಸಿಗಳಿಗೆ ವಾಸದ ಮನೆಗಳಿಗೆ ಹಕ್ಕುಪತ್ರ ವಿತರಿಸಲು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಬಡಾವಣೆ ನಿವಾಸಿಗಳು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರವೂ ಮುಂದುವರಿಯಿತು.
ಶಾಸಕ ಜಿ.ಟಿ.ದೇವೇಗೌಡರ ಅವರ ನಿವಾಸ ಮುಂದೆ ಧರಣಿ ನಡೆಸಿದ ಪ್ರತಿಭಟನಾ ನಿರತರು, ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಮುಂದುವರಿಸಿದರು.
ಹಕ್ಕಿಪಿಕ್ಕಿ, ದೊಂಬಿದಾಸ, ಶಿಳ್ಳೆಕ್ಯಾತ, ಬುಡಬಡುಕೆ ಇತರೆ ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರು ವಾಸಿಸುತ್ತಿರುವ ಏಕಲವ್ಯನಗರದಲ್ಲಿ ವಾಸುತ್ತಿದ್ದಾರೆ. ಆದರೆ ಕೊಳಚೆ ನಿರ್ಮೂಲನಾ ಮಂಡಳಿಯವರು ಮತ್ತು ಸ್ಥಳೀಯ ಕಂದಾಯ ಇಲಾಖೆಯವರು ಜೆ ನರ್ಮ್ ಯೋಜನೆಯಲ್ಲಿ ನಿರ್ಮಿಸಿರುವ ಇಂದಿರಾಗಾಂಧಿ ಬಡಾವಣೆಗೆ ಸ್ಥಳಾಂತರಿಸಿಲು ಸಂಚು ನಡೆಯುತ್ತಿದೆ. ಆದರೆ ಬಹುಮಹಡಿ ಕಟ್ಟಡ ಕಳಪೆಯಾಗಿದೆ. ಜೊತೆಗೆ ಹಸು, ಕುರಿ, ಬಸವ ಸಾಕುಕೊಂಡು ಜೀವನ ನಡೆಸುತ್ತಿರುವವರಿಗೆ ಬಹುಮಹಡಿ ಕಟ್ಟಡದಲ್ಲಿ ಅವುಗಳನ್ನು ಸಾಕಲು ಜಾಗ ಇಲ್ಲ ಎಂದು ದೂರಿದರು.
ಜನರು ವಾಸುತ್ತಿರುವ ಜಾಗವನ್ನು ಅಕ್ರಮ-ಸಕ್ರಮದಡಿ ಮಂಜೂರು ಮಾಡಲು ಸಲ್ಲಿಸಿದ್ದ ಅರ್ಜಿಯನ್ನು ಗೋಮಾಳ ಎಂದು ತಿರಸ್ಕರಿಸಲಾಗಿದೆ. ಆದರೆ ಈಗ ಅದನ್ನು ಭೂಗಳ್ಳರಿಗೆ ಮಾರಾಟ ಮಾಡಲು ಯತ್ನ ನಡೆಯುತ್ತಿದೆ. ಆದ್ದರಿಂದ ನಮಗೆ 94 ಸಿ ಪ್ರಕಾರ ಹಕ್ಕುಪತ್ರ ವಿತರಿಸಲು ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಸರ್ಕಾರದ ಮೇಲೆ ಒತ್ತಡ ತರಬೇಕು. ಅಲ್ಲಿಯ ವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.
ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಮುಖಂಡರಾದ ದೇವೇಂದ್ರ, ಸ್ವಾಮಿ, ಉಮಾಮಹದೇವ್, ಮಹಾದೇವಯ್ಯ, ಸಣ್ಣಯ್ಯ, ರಮೇಶ್ ಇತರರು ಇದ್ದರು.