ಜಿಲ್ಲೆ

ಮನೆ ನಿರ್ಮಾಣಕ್ಕೆ ಮುಡಾ ಅಡ್ಡಗಾಲು

ಸದೇಶ್ ಕಾರ್ಮಾಡ್ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮನೆ ನಿರ್ಮಾಣ ಮಾಡಬೇಕು ಎಂದು ಕನಸು ಕಾಣುತ್ತಿರುವ ಹಲವು ಜನರ ಕನಸನ್ನು ಭಗ್ನಗೊಳಿ ಸುವ ಕಾರ್ಯವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮಾಡಿದೆ.

ಮನೆ ನಿರ್ಮಾಣಕ್ಕೆ ನಕ್ಷೆ ಅನುಮೋದನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿದ ಆದೇಶವನ್ನು ಮುಂದಿಟ್ಟು ಕೊಂಡು ಮುಡಾ ಮನೆ ನಿರ್ಮಾಣಕ್ಕೆ ನಕ್ಷೆ ಅನುಮೋದನೆ ನೀಡುವುದನ್ನು ನಿಲ್ಲಿಸಿದೆ. ಇದರಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರವಾಗದೆ ಇರುವ ಬಡಾವಣೆಗಳಲ್ಲಿ ಮನೆ ನಿರ್ಮಾಣ ಕನಸಿನ ಮಾತಾಗಿದೆ.

ಏನಿದು ಆದೇಶ?:

40 X 60ವರೆಗಿನ ನಿವೇಶನಗಳ ಮನೆ ನಿರ್ಮಾಣ ಮಾಡಲು ಕಟ್ಟಡ ನಕ್ಷೆ ಅನುಮೋದಿಸಲು ಇದುವರೆಗೆ ಮುಡಾದಲ್ಲಿ ಎಕಗವಾಕ್ಷಿ ವ್ಯವಸ್ಥೆ ಇತ್ತು. ಆದರೆ, 40 X 60ವರೆಗಿನ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಯೋಜನ ಪ್ರಾಧಿಕಾರದಿಂದ ತಾಂತ್ರಿಕ ಅಭಿಪ್ರಾಯ ಪಡೆಯುವುದರಿಂದ ರಾಜ್ಯ ಸರ್ಕಾರ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ.

ಸರ್ಕಾರ ಹೊರಡಿಸಿರುವ ಆದೇಶದಿಂದ ಇನ್ನು ಮುಂದೆ 40 X 60ವರೆಗಿನ ನಿವೇಶನಗಳ ಮನೆ ನಿರ್ಮಾಣ ಮಾಡಲು ನಗರ ಸ್ಥಳೀಯ ಸಂಸ್ಥೆಗಳಿಂದ ನಕ್ಷೆ ಅನುಮೋದನೆ ಪಡೆಯಬೇಕು. ಆದರೆ, ನಗರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮುಡಾ ಅನುಮೋದಿತ ಖಾಸಗಿ ಬಡಾವಣೆಗಳು ಇದ್ದು, ಅವುಗಳು ಇನ್ನೂ ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರವಾಗಿಲ್ಲ. ಹೀಗಾಗಿ ಅಂತಹ ಬಡಾವಣೆಗಳಲ್ಲಿ ಮನೆ ನಿರ್ಮಾಣ ಮಾಡಲು ಬಯಸುವವರು ನಗರ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡ ನಕ್ಷೆ ಅನುಮೋದನೆ ಪಡೆಯಲು ಸಾಧ್ಯವಿಲ್ಲ. ಇತ್ತ ಮುಡಾ ಸಹ ಕಟ್ಟಡ ನಕ್ಷೆಗೆ ಅನುಮೋದನೆ ನೀಡುತ್ತಿಲ್ಲ. ಹಾಗಾದರೆ ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರವಾಗದ ಬಡಾವಣೆಗಳಲ್ಲಿ ಮನೆ ನಿರ್ಮಾಣ ಮಾಡಲು ಬಯಸುವವರು ಯಾರ ಬಳಿ ಕಟ್ಟಡ ನಿರ್ಮಾಣದ ನಕ್ಷೆಯನ್ನು ಅನುಮೋದನೆ ಮಾಡಿಸಿಕೊಳ್ಳಬೇಕು ಎಂಬ ಪ್ರಶ್ನೆಗೆ ಪ್ರಾಧಿಕಾರದ ಬಳಿ ಉತ್ತರ ಇಲ್ಲ.

ಸಮಸ್ಯೆ ಏನು?:

ನಗರದಲ್ಲಿ ನಿವೇಶನ ಖರೀದಿಸಲು ಬಡ ಹಾಗೂ ಮಧ್ಯಮ ವರ್ಗದವರು ತಮ್ಮ ದುಡಿಮೆಯ ಬಹುಪಾಲು ಹಣವನ್ನು ವಿನಿ ಯೋಗಿಸಿರುತ್ತಾರೆ. ಹೀಗಾಗಿ ಮನೆ ನಿರ್ಮಾಣಕ್ಕೆ ಬಹುಪಾಲು ಜನರು ಬ್ಯಾಂಕ್ ಸಾಲವನ್ನು ಅವಲಂಬಿಸುತ್ತಾರೆ. ಆದರೆ, ಕಟ್ಟಡ ನಕ್ಷೆಗೆ ಅನುಮೋದನೆ ಪಡೆಯದೆ ಇದ್ದರೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ದೊರೆಯುವುದಿಲ್ಲ. ಹೀಗಾಗಿ ಮನೆ ನಿರ್ಮಾಣ ಮಾಡಲು ಬಯಸುವವರು ಕಚೇರಿಯಿಂದ ಕಚೇರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ವ್ಯವಸ್ಥೆ ಸ್ಥಗಿತ: ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಮುಡಾದಲ್ಲಿ ಕಟ್ಟಡ ನಕ್ಷೆ ಅನುಮೋದನೆಗೆ ಇದ್ದ ಏಕಗವಾಕ್ಷಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದು, ಈ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಿರಿಯ ನಗರ ಯೋಜಕ ಜೋಸೆಫ್ ಕ್ರಿಸ್ಟಿ ಅವರನ್ನು ನಾಗರಿಕ ಸೌಕರ್ಯ ನಿವೇಶನಗಳ ವಿಭಾಗಕ್ಕೆ ನಿಯೋಜಿಸಲಾಗಿದೆ.

ದೊರೆಯದ ಉತ್ತರ:

ಆದೇಶದಿಂದ ಉಂಟಾಗಿರುವ ಗೊಂದಲ ಪರಿಹರಿಸುವಂತೆ ಸಾಕಷ್ಟು ಜನರು ಮುಡಾ ಕಚೇರಿಗೆ ಎಡತಾಕುತ್ತಿದ್ದಾರೆ. ಆದರೆ, ಮುಡಾ ಅಧಿಕಾರಿಗಳಿಂದ ಸಮರ್ಪಕವಾದ ಉತ್ತರ ದೊರೆಯುತ್ತಿಲ್ಲ. ನಾವು ನಗರ ಪಾಲಿಕೆಗೆ ಹಲವಾರು ಬಡಾವಣೆಗಳನ್ನು ಹಸ್ತಾಂತರ ಮಾಡಲು ಕೋರಿದ್ದೇವೆ. ಆದರೆ, ನಗರ ಪಾಲಿಕೆಯಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂಬುದು ಮುಡಾ ಅಧಿಕಾರಿಗಳ ಉತ್ತರ. ಆದರೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಖಾಸಗಿ ಸಂಸ್ಥೆಗಳು ನಿರ್ಮಾಣ ಮಾಡಿರುವ ಬಡಾವಣೆಗಳನ್ನು ನಗರ ಪಾಲಿಕೆ ಅಥವಾ ಮೈಸೂರು ಸುತ್ತಮುತ್ತ ಇರುವ ನಗರ ಸ್ಥಳೀಯ ಸಂಸ್ಥೆಗಳಿಗೆ ದಿಢೀರಾಗಿ ಹಸ್ತಾಂತರ ಮಾಡಲು ಸಾಧ್ಯವಿಲ್ಲ. ನಗರ ಪಾಲಿಕೆಗೆ ನೂತನ ಬಡಾವಣೆಗಳು ಹಸ್ತಾಂತರವಾಗಬೇಕಾದರೆ ಬಡಾವಣೆ ಸಂಪೂರ್ಣ ಅಭಿವೃದ್ಧಿಯಾಗಿರಬೇಕು ಹಾಗೂ ನಗರ ಪಾಲಿಕೆಯ ಕೌನ್ಸಿಲ್‌ನ ಒಪ್ಪಿಗೆ ಅವಶ್ಯಕತೆ ಇದೆ.

ಬಡಾವಣೆಗಳು ಸಂಪೂರ್ಣ ಅಭಿವೃದ್ಧಿಯಾಗಿದ್ದರೆ ಬಡಾವಣೆಗಳನ್ನು ಮುಡಾದಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಸುಲಭವಾಗಿ ಹಸ್ತಾಂತರಿಸಬಹುದು. ಆದರೆ, ಅಭಿವೃದ್ಧಿಗೊಳ್ಳದ ಬಡಾವಣೆಗಳನ್ನು ಅಭಿವೃದ್ಧಿಗೊಳಿಸಿದ ನಂತರವೇ ಹಸ್ತಾಂತರ ಮಾಡಬೇಕು. ಇದಕ್ಕೆ ವರ್ಷಾನುಗಟ್ಟಲೇ ಸಮಯ ಬೇಕಾಗುತ್ತದೆ. ಆದರೆ, ಮನೆ ನಿರ್ಮಾಣ ಮಾಡಲು ಬಯಸುವವರು ಅಲ್ಲಿಯವರೆಗೆ ಮನೆ ನಿರ್ಮಾಣ ಮಾಡುವ ಯೋಜನೆಯನ್ನು ಮುಂದೂಡಲು ಸಾಧ್ಯವಿಲ್ಲ. ಏಕೆಂದರೆ ಪ್ರತಿನಿತ್ಯ ಮರಳು, ಕಬ್ಬಿಣ, ಸಿಮೆಂಟ್, ಇಟ್ಟಿಗೆ ಸೇರಿದಂತೆ ಗೃಹನಿರ್ಮಾಣದ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿದ್ದು, ವಿಳಂಬ ಮಾಡಿದಷ್ಟು ಮನೆ ನಿರ್ಮಾಣದ ವೆಚ್ಚವೂ ಏರಿಕೆಯಾಗಲಿದೆ. ಹಾಗಾಗಿ ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರವಾಗದೆ ಇರುವ ಬಡಾವಣೆಗಳಲ್ಲಿ ಮನೆ ನಿರ್ಮಾಣಕ್ಕೆ ನಕ್ಷೆ ಅನುಮೋದನೆಗೆ ಸಂಬಂಧಿಸಿದಂತೆ ಜನರು ಎದುರಿಸುತ್ತಿರುವ ಸಮಸ್ಯೆಗೆ ಮುಡಾ ತಕ್ಷಣ ಪರಿಹಾರ ಸೂಚಿಸುವ ಅವಶ್ಯಕತೆ ಇದೆ.

ಸರ್ಕಾರದ ಆದೇಶವನ್ನು ಮುಂದಿಟ್ಟುಕೊಂಡು ಕಟ್ಟಡನಕ್ಷೆ ಅನುಮೋದನೆಗೆ ಮುಡಾ ಹಿಂದೇಟು ಹಾಕುತ್ತಿದೆ. ಎಂಡಿಸಿಸಿ ಬ್ಯಾಂಕ್ ಎಂಪ್ಲಾಯೀಸ್ ಬಡಾವಣೆ ಮೈಸೂರು ನಗರ ಪಾಲಿಕೆ ಅಥವಾ ಶ್ರೀರಾಂಪುರ ಪಟ್ಟಣ ಪಂಚಾಯಿತಿಗೆ ವ್ಯಾಪ್ತಿಗೆ ಒಳಪಟ್ಟಿದರೆ ನೇರವಾಗಿ ಅಲ್ಲಿಂದ ನಕ್ಷೆ ಅನುಮೋದನೆ ಪಡೆದುಕೊಳ್ಳಬಹುದಿತ್ತು. ಪಾಲಿಕೆ ಕಚೇರಿಯಲ್ಲಿ ವಿಚಾರಿಸಿದಾಗ ನಮ್ಮ ಬಡಾವಣೆ ಪಾಲಿಕೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ವಿಚಾರ ತಿಳಿಯಿತು. ಶ್ರೀರಾಂಪುರ ಪಟ್ಟಣ ಪಂಚಾಯಿತಿಯಲ್ಲಿ ವಿಚಾರಿಸಿದಾಗ ನಮ್ಮ ಬಡಾವಣೆ ಇನ್ನೂ ಪಟ್ಟಣ ಪಂಚಾಯಿಗೆ ಹಸ್ತಾಂತರವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಆದರೆ, ಮುಡಾ ಅಧಿಕಾರಿಗಳು ನಮ್ಮನ್ನು ಪಾಲಿಕೆ ಕಚೇರಿ, ಶ್ರೀರಾಂಪುರ ಪಟ್ಟಣ ಪಂಚಾಯಿತಿ ಕಚೇರಿಗೆ ಅಲೆಯುವಂತೆ ಮಾಡುತ್ತಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರವಾಗದ ಬಡಾವಣೆಗಳಲ್ಲಿ ಕಟ್ಟಡ ನಿರ್ಮಾಣದ ನಕ್ಷೆಯನ್ನು ಮುಡಾವೇ ಅನುಮೋದನೆ ನೀಡಬೇಕು. ಆದರೆ, ಈ ಬಗ್ಗೆ ಮುಡಾದಲ್ಲಿ ನಮಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂದು ಎಂಡಿಸಿಸಿ ಬ್ಯಾಂಕ್ ಎಂಪ್ಲಾಯೀಸ್ ಬಡಾವಣೆಯಲ್ಲಿ ಮನೆ ನಿರ್ಮಿಸಲು ಬಯಸಿರುವ ನವೀನ್ ಕವಿರತ್ನ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಹೊಸದಾಗಿ ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ 40 X 60ವರೆಗಿನ ನಿವೇಶನಗಳ ಮನೆ ನಿರ್ಮಾಣ ಮಾಡಲು ಮುಡಾದಲ್ಲಿ ನಕ್ಷೆ ಅನುಮೋದನೆ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಡಾದಲ್ಲಿ ಕಟ್ಟಡ ನಕ್ಷೆ ಅನುಮೋದಿಸಲು ಇದ್ದ ಏಕಗವಾಕ್ಷಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದು, ಮುಡಾ ವ್ಯಾಪ್ತಿಯಲ್ಲಿ ಅಭಿವೃದ್ಧಿಗೊಂಡಿರುವ ಬಡಾವಣೆಗಳನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲು ಕ್ರಮ ವಹಿಸಲಾಗುವುದು.
ಜಿ.ಟಿ. ದಿನೇಶ್ ಕುಮಾರ್, ಮುಡಾ ಆಯುಕ್ತ