ಕಡೂರು ಪುರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿದರು. ಮಂಜುಳಾ ಚಂದ್ರು, ಕೆ.ಎಸ್. ಮಂಜುನಾಥ್ ಇದ್ದರು. 
ಜಿಲ್ಲೆ

ಮನೆ ನಿರ್ಮಾಣಕ್ಕೆ ಬಡಾವಣೆ ಅಭಿವೃದ್ಧಿ

ಕಡೂರು: ಆಶ್ರಯ ಯೋಜನೆಯಡಿ ಪುರಸಭೆ ವ್ಯಾಪ್ತಿಯ ಸ್ವರ್ಣಾಂಬ ಬಡಾವಣೆಯಲ್ಲಿ ನಿವೇಶನ ಹಕ್ಕುಪತ್ರ ಹೊಂದಿರುವ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಪುರಸಭೆಯಿಂದ ಬಡಾವಣೆ ಅಭಿವೃದ್ಧಿಗೊಳಿಸಿಕೊಡಲಾಗುವುದು ಎಂದು ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ತಿಳಿಸಿದರು.

ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, 1999ರಲ್ಲಿ ಪುರಸಭೆ ಆಡಳಿತ 28 ಫಲಾನುಭವಿಗಳಿಗೆ ಆಶ್ರಯ ಯೋಜನೆಯಡಿ ನಿವೇಶನಗಳನ್ನು ಹಂಚಿಕೆ ಮಾಡಲು ಪಟ್ಟಣದ ಹೊರವಲಯದಲ್ಲಿರುವ ಮಲ್ಲೇಶ್ವರ ಗ್ರಾಮ ವ್ಯಾಪ್ತಿಯಲ್ಲಿ ಒಬ್ಬರಿಂದ ಭೂಮಿ ಖರೀದಿಸಿ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಿವೇಶನದ ಹಕ್ಕುದಾರ ಫಲಾನುಭವಿಗಳು ಬಡಾವಣೆ ಅಭಿವೃದ್ಧಿಗೊಳಿಸಿ ಬೆಂಬಲವಾಗಿ ನಿಲ್ಲಬೇಕು ಎಂದು ಪುರಸಭೆಗೆ ಮನವಿ ಸಲ್ಲಿಸಿದ್ದಾರೆ ಎಂದರು.

ಇತ್ತೀಚೆಗೆ ಫಲಾನುಭವಿಗಳು ಮನೆ ನಿರ್ಮಿಸಲು ಮುಂದಾದಾಗ ಪುರಸಭೆಗೆ ಜಮೀನು ಮಾರಾಟ ಮಾಡಿದ್ದ ಮೂಲ ಹಕ್ಕುದಾರರು ಅಡ್ಡಿಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆಯಾಗಿದ್ದು, ಬಡಜನರ ಪರ ಹಾಗೂ ಪುರಸಭೆಯಂತೆ ತೀರ್ಪು ಬಂದಿದೆ. ನ್ಯಾಯಯುತವಾದ ಅವರ ಬೇಡಿಕೆ ಈಡೇರಿಸಲು ಪುರಸಭೆ ಅವರ ಬೆಂಬಲದ ಮನವಿಗೆ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಂಡರು.

ಕಡೂರು ಗಣಪತಿ ಆಂಜನೇಯ ದೇವಸ್ಥಾನದ ರಸ್ತೆ ವಿಸ್ತರಣೆಗೊಂಡಿದ್ದು, ದೇವಾಲಯದ ಬದಿ ಶ್ರೀ ಗುರು ರೇವಣಸಿದ್ದೇಶ್ವರ ವೃತ್ತ ನಿರ್ಮಿಸಲು ಸದಸ್ಯರು ಒಕ್ಕೊರಲಿನಿಂದ ಸಮ್ಮತಿ ವ್ಯಕ್ತಪಡಿಸಿದರು.

ಪಟ್ಟಣದ ಕಲ್ಲುಹೊಳೆ ರಸ್ತೆ, ದೊಡ್ಡಪೇಟೆ, ಸಿದ್ದನಾಯ್ಕನ ಬೀದಿ ಮತ್ತು ಲಕ್ಷ್ಮೀ ಆಸ್ಪತ್ರೆ ರಸ್ತೆಗಳ ಅಭಿವೃದ್ಧಿಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ನಮ್ಮ ಮನವಿಗೆ ಯಾವುದೇ ಬೆಲೆ ಇಲ್ಲವಾಗಿದೆ. ಈ ರಸ್ತೆಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ಕಾಮಗಾರಿ ಮಂಜೂರಾದರೂ ಕೆಲಸ ಮಾಡಿಲ್ಲ ಎಂದು ಈರಳ್ಳಿ ರಮೇಶ್ ದೂರಿದರು. ತೋಟದಮನೆ ಮೋಹನ್ ಮಾತನಾಡಿ, ಪುರಸಭೆ ಆಡಳಿತ ಬೇಕಾದ ಕೆಲವೇ ಸದಸ್ಯರ ವಾರ್ಡ್‌ಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಇನ್ನುಳಿದವರ ಬಗ್ಗೆ ನಿರ್ಲಕ್ಷ್ಯ ತೋರಿದೆ. ಇಂಥ ಧೋರಣೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಾರ್ಡ್‌ನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಮಾಹಿತಿಯನ್ನೇ ನೀಡುತ್ತಿಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸಂಬಂಧಪಟ್ಟ ವಾರ್ಡ್ ಸದಸ್ಯರ ಗಮನಕ್ಕೆ ತಾರದೆ ಕೆಲಸ ಮಾಡುವುದು ಸಮಂಜಸವಲ್ಲ ಎಂದು ಹಾಲಮ್ಮ ದೂರಿದರು. ಕೋಟೆ ಬಡಾವಣೆಯಲ್ಲಿ ನೀರಿನ ಸಂಪರ್ಕಕ್ಕಾಗಿ ಪೈಪ್‌ಲೈನ್ ಅಳವಡಿಸಲು ಕಾಮಗಾರಿ ನಿರ್ವಹಿಸಿ ತಿಂಗಳಾದರೂ ಸಂಪೂರ್ಣವಾಗಿಲ್ಲ. ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಬಗೆಹರಿಸಿಲ್ಲ ಎಂದು ಯಾಸೀನ್ ಪುರಸಭೆ ಇಂಜಿನಿಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯರ ಹಲವು ಪ್ರಶ್ನೆ, ಆರೋಪಗಳಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಪುರಸಭೆ ಲಭ್ಯ ಅನುದಾನದಲ್ಲಿ ಪಟ್ಟಣದ ಹಲವಾರು ವಾರ್ಡ್‌ಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಶಾಸಕರ ಬಳಿ ಅಭಿವೃದ್ಧಿ ಕಾರ್ಯಗಳಿಗೆ 5 ಕೋಟಿ ರೂ. ಅನುದಾನ ನೀಡುವಂತೆ ಬೇಡಿಕೆ ಇಟ್ಟಿದ್ದು ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ. ಈ ಅನುದಾನದಲ್ಲಿ ಪ್ರತಿ ವಾರ್ಡ್‌ಗೆ ಕನಿಷ್ಠ 15 ಲಕ್ಷ ರೂ. ಅನುದಾನ ಮೀಸಲಿಡಲಾಗುವುದು. ಸದಸ್ಯರು ತುರ್ತು ಅಥವಾ ಪ್ರಮುಖ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಳಸಿಕೊಳ್ಳಬಹುದು ಎಂದರು. ಅಧಿಕಾರಿಗಳು ಪುರಸಭೆ ವ್ಯಾಪ್ತಿಯಲ್ಲಿ ಅಗತ್ಯವಿರುವ ಪ್ರಕರಣಗಳಲ್ಲಿ ಯಾವುದೇ ಮುಲಾಜಿಲ್ಲದೆ ಕ್ರಮ ಜರುಗಿಸಿ ಎಂದು ಸೂಚಿಸಿದರು.

ಉಪಾಧ್ಯಕ್ಷೆ ಮಂಜುಳಾ ಚಂದ್ರು, ಮುಖ್ಯಾಧಿಕಾರಿ ಕೆ.ಎಸ್.ಮಂಜುನಾಥ್, ಜಿ.ಸೋಮಯ್ಯ, ಸುಧಾ ಉಮೇಶ್, ಮರುಗುದ್ದಿ ಮನು, ಗೋವಿಂದ, ಮಂಡಿ ಇಕ್ಬಾಲ್, ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.