ಜಿಲ್ಲೆ

ಮನೆ ನಿರ್ಮಾಣ ಕಾರ್ಯ ತ್ವರಿತಗೊಳಿಸಿ

ಹಾವೇರಿ: ನೆರೆ ಹಾನಿ ಮನೆಗಳ ದುರಸ್ತಿ ಮತ್ತು ನಿರ್ಮಾಣ ಕಾರ್ಯ ತ್ವರಿತವಾಗಬೇಕು. ಇಲ್ಲವಾದರೆ ಕಠಿಣ ಕ್ರಮ ಅನಿವಾರ್ಯ ಎಂದು ತಹಸೀಲ್ದಾರ್​ಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯಲ್ಲಿ ನೆರೆ ಹಾವಳಿಗೆ ತುತ್ತಾದ ಮನೆಗಳ ನಿರ್ವಣ, ದುರಸ್ತಿ ಕಾರ್ಯಗಳ ಪ್ರಗತಿ ಪರಿಶೀಲನೆ ಹಾಗೂ ಆಶ್ರಯ ಮನೆಗಳ ನಿರ್ಮಾಣ ಕುರಿತು ತಹಸೀಲ್ದಾರ್ ಹಾಗೂ ತಾಪಂ ಇಒಗಳ ಸಭೆಯಲ್ಲಿ ಅವರು ಮಾತನಾಡಿದರು.

ಎಲ್ಲರೂ ಸರ್ಕಾರದ ಮಾರ್ಗಸೂಚಿಯಂತೆ ಕೆಲಸಮಾಡಬೇಕು. ಮನೆ ಕಳೆದುಕೊಂಡ ಸಂತ್ರಸ್ತರ ಸಮಸ್ಯೆಗಳನ್ನು ಆರೇಳು ತಿಂಗಳಾದರೂ ಇತ್ಯರ್ಥಪಡಿಸಿಲ್ಲ. ಇಲ್ಲದ ಸಬೂಬು ಹೇಳಬೇಡಿ, ಮೂರು ದಿನಗಳ ಕಾಲಾವಕಾಶ ನೀಡುತ್ತೇನೆ. ಒಂದೊಮ್ಮೆ ಇದೇ ಮಂದಗತಿಯ ಪ್ರಗತಿ ತೋರಿಸಿದರೆ ಕಠಿಣ ಕ್ರಮ ನಿಶ್ಚಿತ ಎಂದು ಎಚ್ಚರಿಸಿದರು.

ಮರಳಿನ ವ್ಯವಸ್ಥೆ: ಆಶ್ರಯ ಮನೆ ಹಾಗೂ ನೆರೆಯಿಂದ ಹಾನಿಯಾದ ಮನೆಗಳ ದುರಸ್ತಿ ಹಾಗೂ ಪುನರ್ ನಿರ್ಮಾಣ ಕಾರ್ಯಕ್ಕೆ ಮರಳಿನ ಕೊರತೆ ಕುರಿತು ತಹಸೀಲ್ದಾರ್​ಗಳು ಸಭೆಯ ಗಮನಕ್ಕೆ ತಂದರು. ಆಗ ತಾಲೂಕು ಟಾಸ್ಕ್​ಫೋರ್ಸ್ ಸಮಿತಿ ವತಿಯಿಂದಲೇ ಮರಳು ಪೂರೈಕೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲು ತೀರ್ವನಿಸಲಾಯಿತು. ಗಣಿ ಮತ್ತು ಭೂ ವಿಜ್ಞಾನ ಇಲಾಖಾ ಅಧಿಕಾರಿಗಳು ಈ ಜವಾಬ್ದಾರಿ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಉಪವಿಭಾಗಾಧಿಕಾರಿಗಳಾದ ಡಾ. ದಿಲೀಪ್ ಶಶಿ, ಅನ್ನಪೂರ್ಣ ಮುದುಕಮ್ಮನವರ, ತಹಸೀಲ್ದಾರ್​ಗಳಾದ ಶಂಕರ ಜಿ.ಎಸ್., ಬಸವನಗೌಡ ಕೊಟೂರ, ಎಸ್.ಎ. ಭಗವಾನ್, ಗುರು ಬಸವರಾಜ, ಶರಣಮ್ಮ ಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪಲತಾ ಕವಲೂರು ಇತರರಿದ್ದರು.