ಮೈಸೂರು: ಮಳೆ ಹಾನಿಯಿಂದ ತೊಂದರೆಗೀಡಾದ ಕಟ್ಟಡ, ಮನೆಗಳ ದುರಸ್ತಿಗೆ ಸೂಕ್ತ ಕ್ರಮಕೈಗೊಳ್ಳಬೇಕು. ಬಾಕಿ ಉಳಿದಿರುವ ಕಾಮಗಾರಿಗಳನ್ನು ಜಂಟಿ ಸರ್ವೇ ಮೂಲಕ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಅಧಿಕಾರಿಗಳಿಗೆ ಸೂಚಿಸಿದರು.
2019 ರಿಂದ ಇಲ್ಲಿಯವರೆಗೆ ಮಳೆ, ಪ್ರವಾಹದಿಂದ ಹಾನಿಯಾದ ವಾಸದ ಮನೆಗಳಿಗೆ ಸಂಬಂಧಪಟ್ಟಂತೆ ಮೊದಲನೇ ಕಂತಿನ ಪರಿಹಾರ ಹಣವನ್ನು ಪಡೆದುಕೊಂಡಿದ್ದರೂ ಇಲ್ಲಿಯವರೆಗೂ ಮನೆ ನಿರ್ಮಾಣ ಪ್ರಾರಂಭಿಸದೇ ಇರುವುದು ಕಂಡುಬಂದಿದೆ. ಇಂತಹ ಪ್ರಕರಣಗಳಲ್ಲಿ ಪಿಡಿಒ, ವಿಎಒ ಮತ್ತು ಪಿಆರ್‌ಇಡಿ ಇಂಜಿನಿಯರ್‌ಗಳು ಜಂಟಿ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಲು ವಿಡಿಯೋ ಸಂವಾದಲ್ಲಿ ನಿರ್ದೇಶನ ನೀಡಿದರು.
2019-20 ರಿಂದ ಇಲ್ಲಿಯ ವರೆಗೆ ಮಳೆ, ಪ್ರವಾಹದಿಂದ ಹಾನಿಯಾದ ಶಾಲೆ, ಅಂಗನವಾಡಿ, ರಸ್ತೆ, ಸೇತುವೆ ದುರಸ್ತಿ ಕಾಮಗಾರಿಗಳು ಬಾಕಿ ಉಳಿದಿದ್ದರೆ ತಕ್ಷಣವೇ ಪೂರ್ಣಗೊಳಿಸಿ ಸಂಬಟಧಪಟ್ಟ ಅಧಿಕಾರಿಗಳು ಬಳಕೆ ಪ್ರಮಾಣ ಪತ್ರ ಸಲ್ಲಿಸಲು ನಿರ್ದೇಶನ ನೀಡಿದರು.
ಜೂನ್ 2023 ರಿಂದ ಇಲ್ಲಿಯವರೆಗೆ ಹಾನಿಯಾಗಿರುವ ಮನೆಗಳ ವಿವರಗಳನ್ನು ತ್ರಿ-ಸದಸ್ಯ ಸಮಿತಿ (ವಿಎ ಒ /ಪಿಡಿಒ/ ಪಿಆರ್‌ಇಡಿ ಇಂಜಿನಿಯರ್) ಜಂಟಿ ಸಮೀಕ್ಷೆ ತಪಾಸಣೆ ನಡೆಸಿ ಆರ್‌ಜಿ ಎಚ್‌ಸಿಎಲ್ ತಂತ್ರಾಂಶದಲ್ಲಿ ನಮೂದಿಸಲು ಸೂಚಿಸಿದರು.
ಆಗಸ್ಟ್ 21ರೊಳಗೆ ಕ್ರಮವಹಿಸಿ ಬಾಕಿ ಇರುವ ಎಲ್ಲ ಪ್ರಕರಣಗಳನ್ನು ಇತ್ಯರ್ಥಪಡಿಸಿ ಅನುಪಾಲನಾ ವರದಿ ಸಲ್ಲಿಸಲು ಉಪವಿಭಾಗಾಧಿಕಾರಿಗಳಿಗೆ ತಿಳಿಸಿದರು. ಒಂದೊಮ್ಮೆ ಆದೇಶ ಪಾಲನೆ ಮಾಡಲು ವಿಫಲರಾಗುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕ್ರಮವಹಿಸುವುದು ಅನಿವಾರ್ಯವಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರ ಪಾಲಿಕೆಯ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಪ್, ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ ಕೃಷ್ಣರಾಜು, ಉಪವಿಭಾಗಾಧಿಕಾರಿ ಕೆ.ಆರ್.ರಕ್ಷಿತ್ ಇತರರು ಇದ್ದರು.