ವಿರಾಜಪೇಟೆ: ಭತ್ತ ತುಂಬಿದ ಕೇರಳದ ಲಾರಿ ಪಟ್ಟಣದ ತೆಲುಗರ ಬೀದಿಯಲ್ಲಿ ಅಪಘಾತಕ್ಕೀಡಾಗಿ ಚಾಲಕ ಗಂಭೀರ ಗಾಯಗೊಂಡಿದ್ದಾನೆ.
ಕೇರಳ ರಾಜ್ಯದ ಇರಿಟಿ ವಳ್ಳಿತೋಡು ಕುನ್ನತ್ ನಿವಾಸಿ ಪ್ರವೀಣ್(45) ಗಾಯಗೊಂಡಿರುವ ಚಾಲಕ. ನ.10ರಂದು ವಳ್ಳಿತೋಡುವಿನಿಂದ ಭದ್ರಾವತಿಗೆ ಭತ್ತ ತುಂಬಲು ಲಾರಿ ತೆರಳಿತ್ತು. ಲಾರಿ ಭದ್ರಾವತಿ-ಹಾಸನ-ಕುಶಾಲನಗರ-ವಿರಾಜಪೇಟೆ ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿತ್ತು. ಸೋಮವಾರ ಸಂಜೆ ವಿರಾಜಪೇಟೆ ಅಯ್ಯಪ್ಪ ಬೆಟ್ಟದ ತಪ್ಪಲಿನ ಮುಖ್ಯರಸ್ತೆಗೆ ತಲುಪಿದ್ದು, ರಸ್ತೆ ಕಿರಿದಾಗಿತ್ತಲ್ಲದೆ, ಗುಂಡಿಮಯವಾಗಿದೆ.
ಗುಂಡಿಯನ್ನು ತಪ್ಪಿಸಲು ಮತ್ತು ಎದುರು ಬದಿಯಿಂದ ಬರುತಿದ್ದ ಆಟೋವೊಂದಕ್ಕೆ ಸ್ಥಳಾವಕಾಶ ನೀಡಲು ಮುಂದಾದಾಗ ಲಾರಿ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ರಸ್ತೆಯ ಕೆಳಭಾಗಕ್ಕೆ ಹೊಂದಿಕೊಂಡಿರುವ ಮನೆಯ ಹಿತ್ತಲ ಛಾವಣಿಯ ಮೇಲೆ ಬಿದ್ದಿದೆ. ಚಾಲಕನ ತಲೆಭಾಗಕ್ಕೆ ತೀವ್ರ ಗಾಯಗಳಾಗಿವೆ. ಸ್ಥಳೀಯರ ನೆರವಿನಿಂದ ಗಾಯಗೊಂಡ ಚಾಲಕನನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಗಾಗಿ ಕೇರಳ ಕಣ್ಣೂರಿಗೆ ರವಾನಿಸಲಾಗಿದೆ.
ಮಾಹಿತಿ ಪಡೆದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಾಣಾಪಾಯದಿಂದ ಪಾರಾದ ಕುಟುಂಬ: ಲಾರಿ ಬಿದ್ದ ಮನೆಯ ಮಾಲೀಕ ನಿವೃತ್ತ ನ್ಯಾಯಾಂಗ ಶಿರಸ್ತೇದಾರ್ ಎಸ್.ಎನ್.ಲಕ್ಷ್ಮೀಶ್, ಪತ್ನಿ, ಮಗಳು ಮತ್ತು ವೃದ್ಧ ತಾಯಿ ಜತೆ ಮನೆಯ ಮುಂದಿರುವ ಕೋಣೆಯಲ್ಲಿ ಟಿ.ವಿ.ನೋಡುತ್ತಾ ಕುಳಿತಿದ್ದರು. ಅಪಘಾತ ಸಂಭವಿಸುವ ಸ್ವಲ್ಪ ಸಮಯ ಹಿಂದೆ ಲಕ್ಷ್ಮೀಶ್ ಅವರ ಪತ್ನಿ ಮನೆಯ ಮಂದಿಗೆ ಕಾಫಿ ಮಾಡಿ ಅಡುಗೆ ಮನೆಯಿಂದ ಮುಂದಿನ ಕೋಣೆಗೆ ಬಂದಿದ್ದಾರೆ. ಈ ಸಮಯ ಲಾರಿ ಅವಘಡ ಸಂಭವಿಸಿದೆ.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದೇವೆ. ಸುಮಾರು 25 ವರ್ಷಗಳಿಂದ ಇಲ್ಲಿ ನೆಲೆಸಿದ್ದೇವೆ. ಇಂತಹ ಅಪಘಾತ ಇದೇ ಮೊದಲು ಎಂದು ಲಕ್ಷ್ಮೀಶ್ ಅವರ ಪತ್ನಿ ಹೇಳಿದರು.
ಅಪಘಾತದಿಂದ ಮನೆಯ ಹಿತ್ತಲ ಛಾವಣಿ ಸಂಪೂರ್ಣ ಜಖಂಗೊಂಡಿದೆ. ಸನಿಹದಲ್ಲಿದ್ದ ನಿವೃತ್ತ ಶಿಕ್ಷಕಿ ಸರಸ್ವತಿ ಅವರ ಮನೆ ತಡೆಗೋಡೆ ನೆಲಕ್ಕೆ ಉರುಳಿದೆ. ಜಖಂಗೊಂಡಿರುವ ಮನೆಯ ಮಾಲೀಕರು ವಿರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.