ಚಿತ್ರದುರ್ಗ: ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಈಚಲನಾಗೇನಹಳ್ಳಿಯ ಮನೆಯೊಂದರ ಗೋಡೆ ಕುಸಿದು ರಂಗಮ್ಮ (70) ಮೃತಪಟ್ಟಿದ್ದಾರೆ. ಗುರುವಾರ ಕೂಡ ಜಿಲ್ಲೆಯ ಹಲವೆಡೆ ವರುಣಾಗಮನ ಆಗಿದ್ದು, ಅವಾಂತರ ಸೃಷ್ಟಿಸಿದೆ.
ಜಿಲ್ಲಾದ್ಯಂತ ವರುಣನ ಅಬ್ಬರಕ್ಕೆ 59 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದ್ದು, ಆಯಾ ತಾಲೂಕಿನ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇಲ್ಲಿನ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ಶೇಂಗಾ, ಹತ್ತಿ ಸೇರಿ ಇನ್ನಿತರೆ ಬೆಳಗಳಿಗೂ ಹಾನಿ ಉಂಟಾಗಿದೆ ಎಂಬ ಮಾಹಿತಿ ಇದ್ದು, ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆಗೂ ಮುಂದಾಗಿದ್ದಾರೆ.
ಮೃತ ವೃದ್ಧೆ ರಂಗಮ್ಮ ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ಮಗ ಕೆಲಸಕ್ಕೆ ಹೋದ ವೇಳೆ ಮನೆಯ ಗೋಡೆ, ಚಾವಡಿ ಕುಸಿದು ಮೃತಪಟ್ಟಿದ್ದಾರೆ. ವೃದ್ಧೆಗೆ ತಲಾ ಇಬ್ಬರು ಪುತ್ರರು, ಪುತ್ರಿಯರು ಇದ್ದಾರೆ.
ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಮೃತರ ವಾರಸುದಾರರಿಗೆ 4 ಲಕ್ಷ ರೂ. ಜೊತೆಗೆ ರಾಜ್ಯ ಸರ್ಕಾರದ ಆದೇಶದನ್ವಯ ಹೆಚ್ಚುವರಿಯಾಗಿ 1 ಲಕ್ಷ ರೂ. ಸೇರಿ ಒಟ್ಟು 5 ಲಕ್ಷ ರೂ. ಪರಿಹಾರ ವಿತರಿಸುವಂತೆ ತಹಸೀಲ್ದಾರ್ ಡಾ.ನಾಗವೇಣಿ ಅವರಿಗೆ ಸೂಚಿಸಿದರು.
ಗ್ರಾಪಂ ಅಧ್ಯಕ್ಷೆ ನಿರ್ಮಲಾ ದೇವರಾಜ್, ಸದಸ್ಯ ಸುರೇಶ್, ಮಾಜಿ ಸದಸ್ಯ ಸಿದ್ದಣ್ಣ, ಕಾಂಗ್ರೆಸ್ ಮುಖಂಡರಾದ ಕೆ.ಸಿ.ನಾಗರಾಜ್, ಪ್ರಕಾಶ್ ರಾಮಾನಾಯ್ಕ, ಸಯ್ಯದ್ ಖುದ್ದೂಸ್, ಬಿ.ಮಂಜುನಾಥ್, ಜಗದೀಶ್ ಇತರರಿದ್ದರು.