ಜಿಲ್ಲೆ

ಮನೆ ಗೋಡೆ ಕುಸಿದು ಬಿದ್ದು ಸಾವು

ವಿಜಯವಾಣಿ ಸುದ್ದಿಜಾಲ ಶಿಗ್ಗಾಂವಿ (ಗ್ರಾ)

ಶಿಥಿಲಾವಸ್ಥೆಯಲ್ಲಿದ್ದ ಮನೆಯ ಗೋಡೆ ಕುಸಿದು ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ಕುನ್ನೂರ ಗ್ರಾಮದ ಪ್ಲಾಟ್​ನಲ್ಲಿ ಬುಧವಾರ ಬೆಳಗಿನ ಜಾವ ಸಂಭವಿಸಿದೆ.

ಕುನ್ನೂರ ಗ್ರಾಮದ ಪ್ಲಾಟ್​ನ ನಿವಾಸಿ ಮುಸ್ತಾಕ್ ಶರೀಫಸಾಬ್ ಯರಗುಪ್ಪಿ (27) ಮೃತಪಟ್ಟ ದುರ್ದೈವಿ. ಬುಧವಾರ ಬೆಳಗಿನ ಜಾವ ನಿರಂತರವಾಗಿ ಸುರಿದ ಮಳೆಗೆ ಶಿಥಿಲಗೊಂಡಿದ್ದ ಗೋಡೆ ಕುಸಿದು ಮೇಲೆ ಬಿದ್ದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಮುಸ್ತಾಕನನ್ನು ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಸ್ತಾಕ್​ನ ಪತ್ನಿಗೆ ಕೆಲ ದಿನಗಳ ಹಿಂದಷ್ಟೇ ಹೆರಿಗೆ ಆಗಿದ್ದು ಮಗು ಹಾಗೂ ಕುಟುಂಬಸ್ಥರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಮಗು ಜನಿಸಿದ ಕೆಲವೇ ದಿನಗಳಲ್ಲಿ ತಂದೆ ಮೃತಪಟ್ಟಿದ್ದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ತಡಸ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿದ್ದಾರೆ.