ಜಿಲ್ಲೆ

ಮನೆ ಕುಸಿತ ಸಮೀಕ್ಷಾ ವರದಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿ

ಬೀದರ್: ಅತಿವೃಷ್ಟಿಯಿಂದಾಗಿ ಜಿಲ್ಲೆಯ ಹಲವೆಡೆ ಮನೆಗಳು ಕುಸಿತವಾಗಿರುವ ಘಟನೆಗಳು ನಡೆದಿವೆ. ಕೂಡಲೇ ಸಮೀಕ್ಷಾ ವರದಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಬೇಕು. ಶೀಘ್ರ ಪರಿಹಾರ ವಿತರಣೆಯಾಗುವಂತೆ ನೋಡಿಕೊಳ್ಳಬೇಕು ಎಂದು ಪಶು ಸಂಗೋಪನೆ, ವಕ್ಫ್, ಹಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರಿಗೆ ನಿರ್ದೇಶನ ನೀಡಿದ್ದಾರೆ.

ತಹಸೀಲ್ದಾರರು, ನಾಡ ತಹಸೀಲ್ದಾರರು, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರು ಮನೆ ಹಾನಿಯಾದವರಲ್ಲಿ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಸಮೀಕ್ಷೆಯನ್ನು ಮಾಡಬೇಕು. ಪರಿಹಾರ ನೀಡಿಕೆಯಲ್ಲಿ ಅನ್ಯಾಯವಾದರೆ ಸಂಬಂಧಪಟ್ಟ ತಹಸೀಲ್ದಾರರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸೂಚಿಸಿರುವ ಸಚಿವರು, ಈ ವಿಷಯದಲ್ಲಿ ವೈಯಕ್ತಿಕ ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳು ತಮ್ಮ ಕೆಳಹಂತದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು. ಅತಿವೃಷ್ಠಿಯಲ್ಲಿ ಮನೆ ಹಾನಿಯಾದವರು ದೂರವಾಣಿ ಮೂಲಕ ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ. ಕೆಲಸ ಮಾಡದ ಕೆಳ ಹಂತದ ನೌಕರರ ಮೇಲೆ ಶಿಸ್ತು ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ತಹಸೀಲ್ದಾರರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಯಾವುದೇ ಸಂಕಷ್ಟ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರಬೇಕು. ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧಾಪ್ಯ ವೇತನ, ವಿಕಲಚೇತನರು ಮತ್ತು ವಿಧವೆಯರಿಗೆ ನೀಡಲಾಗುವ ಮಾಸಿಕ ವೇತನ ಸೌಲಭ್ಯ ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ದೂರುಗಳು ಪದೇಪದೇ ಕೇಳಿ ಬರುತ್ತಿವೆ. ಕರೊನಾ ಸಂಕಷ್ಟ ಮತ್ತು ಅತಿವೃಷ್ಟಿಯಿಂದಾಗಿ ಈಗಾಗಲೇ ಜನರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಜೀವನ ನಿರ್ವಹಣೆಗೆ ಯಾವುದೇ ರೀತಿಯ ಆದಾಯ ಮೂಲಗಳಿಲ್ಲದ ಅಂಗವಿಕಲರು, ವಯೋವೃದ್ಧರಿಗೆ ಸಮಸ್ಯೆಯಾಗದಂತೆ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.