ಅರಸೀಕೆರೆ : ಹಾಡುಹಗಲೇ ಮನೆಗೆ ನುಗ್ಗಿರುವ ಕಳ್ಳರು 9.45 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗು ನಗದು ಕಳವು ಮಾಡಿರುವ ಘಟನೆ ತಾಲ್ಲೂಕಿನ ನಾಗತವಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ನಿವಾಸಿ ಲಕ್ಷ್ಮೀಕಾಂತ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಬೆಳಿಗ್ಗೆ 10 ಗಂಟೆಗೆ ಜಮೀನು ಕಾರ್ಯನಿಮಿತ್ತ ಪತ್ನಿ ಶಾಂತ ಅವರೊಂದಿಗೆ ಮನೆಗೆ ಬೀಗ ಹಾಕಿಕೊಂಡು ತೆರಳಿದ್ದರು. ಮಧ್ಯಾಹ್ನ ಊಟ ತರಲೆಂದು ಶಾಂತಾ ಮನೆಗೆ ಬಂದಾಗ ಮನೆಯ ಬಾಗಿಲು ಒಳಗಡೆಯಿಂದ ಲಾಕ್ ಆಗಿರುವುದು ತಿಳಿದಿದೆ. ಬಳಿಕ ಬಾಗಿಲು ಮುರಿದು ಒಳಗೆ ಹೋಗಿ ನೋಡಿದಾಗ ಕಳ್ಳರು ಕಿಟಕಿ ಬಾಗಿಲಿನಿಂದ ಪ್ರವೇಶಿಸಿ ಗಾಡ್ರೇಜ್ ಬೀರಿನ ಬಾಗಿಲನ್ನು ಬಲವಾಧ ಆಯುಧದಿಂದ ಮೀಟಿ ಕೃತ್ಯ ಎಸಗಿರುವುದು ಗೊತ್ತಾಗಿದೆ. 3 ಲಕ್ಷ ರೂ. ಹಣ, ಜತೆಗೆ 20 ಗ್ರಾಂ ತೂಕದ 2 ಜೊತೆ ಚಿನ್ನದ ಓಲೆ, 12 ಗ್ರಾಂನ 1 ಜೊತೆ ಚಿನ್ನದ ಓಲೆ, 5 ಗ್ರಾಂನ ಚಿನ್ನದ ಮಾಟಿ, 20 ಗ್ರಾಂ ತೂಕದ 2 ಚಿನ್ನದ ಉಂಗುರ, 20 ಗ್ರಾಂ ತೂಕದ ಚಿನ್ನದ ನಕ್ಲೇಸ್, 30 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, 5 ಗ್ರಾಂ ತೂಕದ ಮಕ್ಕಳ 2 ಚಿನ್ನದ ಉಂಗುರ, 5 ಗ್ರಾಂ ತೂಕದ ಚಿನ್ನದ ಬ್ರಾಸ್‌ಲೆಟ್, 5 ಗ್ರಾಂ ತೂಕದ ಚಿನ್ನದ ಓಲೆ, 50 ಗ್ರಾಂ ತೂಕದ ಬೆಳ್ಳಿಯ ಕಾಲು ಚೈನ್ ಅಪಹರಿಸಿದ್ದಾರೆ. ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.