ಜಿಲ್ಲೆ

ಮನೆ ಕಂದಾಯ ಹೆಚ್ಚಿಸದಿರಲು ಪ.ಪಂ. ನಿರ್ಧಾರ

ಸೋಮವಾರಪೇಟೆ: ಪಟ್ಟಣ ಪಂಚಾಯಿತಿಯ ವಿಶೇಷ ಸಾಮಾನ್ಯ ಸಭೆ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು.


ಪಟ್ಟಣ ವ್ಯಾಪ್ತಿಯಲ್ಲಿ ಮನೆ ಕಂದಾಯವನ್ನು ಹೆಚ್ಚಿಸಲು ಸರಕಾರದ ಸೂಚನೆ ಇರುವುದನ್ನು ಸಭೆಯಲ್ಲಿ ಚರ್ಚಿಸಲಾಗಿ, ಪ್ರತಿವರ್ಷ ಕಂದಾಯ ಏರಿಕೆಯಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸದ್ಯಕ್ಕೆ ಯಾವುದೇ ಹೆಚ್ಚುವರಿ ತೆರಿಗೆ ಸಂಗ್ರಹಿಸುವುದು ಬೇಡವೆಂದು ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಸದಸ್ಯರು ಒಮ್ಮತದ ತೀರ್ಮಾನವನ್ನು ಕೈಗೊಂಡರು.


ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ವಾರ್ಷಿಕ ಟೆಂಡರ್ ಕರೆಯುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಪಟ್ಟಣ ವ್ಯಾಪ್ತಿಯಲ್ಲಿರುವ ಶೌಚಗೃಹಗಳು ಶುಚಿತ್ವದಿಂದ ಕೂಡಿಲ್ಲ. ತಕ್ಷಣವೇ ಎಲ್ಲ ಶೌಚಗೃಹಗಳನ್ನು ಸುಸ್ಥಿತಿಯಲ್ಲಿಡುವಂತೆ ಅಧ್ಯಕ್ಷರು, ಮುಖ್ಯಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಕರಿಗೆ ಸೂಚನೆ ನೀಡಿದರು.
ಖಾಸಗಿ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರ ತಂಗುದಾಣದಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸಮರ್ಪಕವಾಗಿಲ್ಲ. ತಕ್ಷಣವೇ ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಸೂಚಿಸಲಾಯಿತು.


ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯರಾದ ಶೀಲಾ ಡಿಸೋಜ, ಜೀವನ್, ಮಹೇಶ್, ಮೃತ್ಯಂಜಯ, ಶುಭಕರ್, ಮೋಹಿನಿ, ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಇದ್ದರು.