ಕಲಬುರಗಿ: ಮಹಿಳೆಯರು ಮನೆಯಲ್ಲಿ ಮಾಡಿದ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಪಾನಿಪುರಿ, ಪಿಜ್ಜಾ, ಬರಗರ್ ಹಾಗೂ ಬೇಕರಿ ಐಟಮ್ಸ್ ತಮ್ಮ ಮಕ್ಕಳಿಗೆ ನೀಡುವುದರ ಜತೆಗೆ ತಾವೂ ಸೇವನೆ ಮಾಡುತ್ತಿರುವುದರಿಂದಾಗಿ ಅಪೌಷ್ಠಿಕತೆ ಹೆಚ್ಚಾಗುತ್ತಿದೆ ಎಂದು ಕಲಬುರಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಹೇಳಿದರು.
ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ ಹಾಗೂ ಕಲಬುರಗಿ ನಗರ ಶಿಶು ಅಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಬಾಲಕಿಯರ ಸರ್ಕಾರಿ ಬಾಲ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪೋಷಣ ಅಭಿಯಾನ ಯೋಜನೆಯ ರಾಷ್ಟಿಯ ಪೋಷಣ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲರೂ ತಮ್ಮ ಮನೆಯಲ್ಲಿ ಮಾಡಿದ ಆಹಾರ ಮಾತ್ರ ಸೇವನೆ ಮಾಡಬೇಕು. ಉತ್ತಮವಾದ ಆಹಾರ ಪದಾರ್ಥ ಸೇವನೆ ಮಾಡುವುದರಿಂದ ಸಮಾಜದಲ್ಲಿನ ಅಪೌಷ್ಠಿಕತೆ ಹೋಗಲಾಡಿಸಲು ಸಾಧ್ಯ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಿರಿಜಾ ನಿಗ್ಗುಡಗಿ ಮಾತನಾಡಿ, ಗಡಿಗೆಗಳಲ್ಲಿ ತಯಾರಿಸಿದ ಆಹಾರ ಸೇವನೆ ಮಾಡಬೇಕು. ಕಬ್ಬಿಣದ ಕಡಾಯಿಗಳಲ್ಲಿ ಆಹಾರ ತಯಾರಿಸಬೇಕು. ಇದರಿಂದ ಕಬ್ಬಿಣ ಅಂಶ ಮತ್ತು ಕ್ಯಾಲ್ಸಿಯಂ ಅಂಶ ನಮ್ಮ ದೇಹಕ್ಕೆ ಸೇರುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನವೀನ್ಕುಮಾರ್.ಯು ಮಾತನಾಡಿದರು. ಕಲಬುರಗಿ (ನಗರ) ಶಿಶು ಅಭಿವೃಧ್ಧಿ ಯೋಜನಾಧಿಕಾರಿ ಭೀಮರಾಯ ಕಣ್ಣೂರ್ ಪ್ರಾಸ್ತಾವಿಕ ಮಾತನಾಡಿದರು.
ಬಾಲ ಮಂದಿರದ ಅಧೀಕ್ಷಕಿ ಶಿವನಂದಮ್ಮ, ಜಿಲ್ಲಾ ಸಂಯೋಜಕ ಸಂಜೀವಕುಮಾರ್ ಇತರರು ಇದ್ದರು. ಆರತಿ ತುಪ್ಪದ ನಿರೂಪಿಸಿದರು. ಶೋಭಾ ಪಾಟೀಲ್ ವಂದಿಸಿದರು.