ಚಿತ್ರದುರ್ಗ: ಕರ್ತವ್ಯನಿರತ ಕೋಲ್ಕತದ ಟ್ರೈನಿ ವೈದ್ಯೆ ಅತ್ಯಾಚಾರ, ಹತ್ಯೆಗೈದ ಅಮಾನವೀಯ ಕೃತ್ಯ ಖಂಡಿಸಿ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು, ದಾದಿಯರು, ಖಾಸಗಿ ಆಸ್ಪತ್ರೆಗಳ ವೈದ್ಯರು ಶನಿವಾರ ಪ್ರತಿಭಟನೆ ನಡೆಸಿದರು. ಕೆಲ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಬೆಂಬಲ ನೀಡಿದರು.
ದುಷ್ಕೃತ್ಯಕ್ಕೆ ಕಾರಣರಾದ ದುಷ್ಕರ್ಮಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನಾತ್ಮಕವಾಗಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ದೇಶದ ಮಹಿಳೆಯರಿಗೆ ರಕ್ಷಣೆ ಒದಗಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ವೈದ್ಯರು ರಾತ್ರಿ ಪಾಳೆಯದಲ್ಲಿ ರೋಗಿಗಳು ಬಂದರೆ ಚಿಕಿತ್ಸೆ ನೀಡಬೇಕಾಗುತ್ತದೆ. ಇಂತಹ ಸಮಯವನ್ನು ದುರುಪಯೋಗ ಪಡಿಸಿಕೊಂಡು ಕೆಲವರು ವೈದ್ಯೆಯನ್ನು ಅತ್ಯಾಚಾರ ಮಾಡಿ, ಅಮಾನೀಯವಾಗಿ ಜೀವ ತೆಗೆದಿರುವ ಘಟನೆ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದೆ. ಕರ್ತವ್ಯ ನಿರ್ವಹಿಸಲು ಮಹಿಳಾ ವೈದ್ಯೆಯರೂ ಭಯಭೀತರಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ದುಷ್ಕೃತ್ಯ ತಡೆಯುವಲ್ಲಿ ಅಲ್ಲಿನ ಕಾಲೇಜಿನ ಆಡಳಿತ ಮಂಡಳಿ ವಿಫಲವಾಗಿದೆ. ಮೊದಲ ದಿನದ ನಂತರ ಪೊಲೀಸ್ ತನಿಖೆ ಸ್ಥಗಿತಗೊಂಡಿದೆ. ಕೋಲ್ಕತ ಹೈಕೋರ್ಟ್ ತನಿಖೆ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸುವಂತೆ ಸೂಚಿಸಿದೆ. ಆದರೂ ಕ್ರಮವಹಿಸಿಲ್ಲ. ಅಲ್ಲದೆ, ಆಸ್ಪತ್ರೆಯಲ್ಲಿ ಕೃತ್ಯ ನಡೆದ ಸ್ಥಳವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ, ವಿವಿಧ ಸಾಕ್ಷಿಗಳನ್ನು ನಾಶಪಡಿಸಿದ್ದಾರೆ. ಇಷ್ಟಾದರೂ ಅಲ್ಲಿನ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲಿ ಪ್ರತಿಭಟನೆಗೆ ಮುಂದಾದ ವೈದ್ಯಕೀಯ ವಿದ್ಯಾರ್ಥಿಗಳ ಮೇಲೂ ಹಲ್ಲೆ ನಡೆದಿದೆ. ಮಹಿಳೆಯರೇ ಪದೇ ಪದೆ, ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದಾರೆ. ಘಟನೆಯಿಂದಾಗಿ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಸುರಕ್ಷಿತ ಸ್ಥಳಗಳ ಕೊರತೆ, ಸಂಘಟಿತ ಭದ್ರತಾ ಕೊರತೆ ಇರುವುದು ಕಂಡುಬಂದಿದೆ. ಗೂಂಡಾಗಿರಿ, ಅನಾಗರಿಕತೆಗೂ ವಿಧ್ವಂಸಕ ಕೃತ್ಯ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು.
ಕ್ರೌರ್ಯಕ್ಕೆ ಅನುಗುಣವಾಗಿ ದುಃಖಿತ ಕುಟುಂಬಕ್ಕೆ ಸೂಕ್ತ, ನ್ಯಾಯಯುತ ಪರಿಹಾರ ನೀಡಬೇಕು. ಆಸ್ಪತ್ರೆಗಳ ಮತ್ತು ವೈದ್ಯರ ಮೇಲಿನ ಹಿಂಸಾಚಾರ ಒಪ್ಪಿಕೊಳ್ಳಲು ಇಷ್ಟವಿಲ್ಲದಿರುವುದು ಬದಲಾಗಬೇಕು. ಎಲ್ಲ ಆಸ್ಪತ್ರೆಗಳ ಭದ್ರತೆಯೂ ವಿಮಾನ ನಿಲ್ದಾಣಗಳ ಭದ್ರತೆಗಿಂತಲೂ ಕಡಿಮೆ ಇರಬಾರದು. ಸುರಕ್ಷಿತ ವಲಯಗಳಾಗಿ ಘೋಷಿಸಿ, ಭದ್ರತಾ ಸಿಬ್ಬಂದಿ ನಿಯೋಜಿಸಬೇಕು. ವೈದ್ಯೆಯರು, ಶುಶ್ರೂಷಕಿಯರಿಗೆ ಸುರಕ್ಷಿತ ವಿಶ್ರಾಂತಿ ಕೊಠಡಿಗಳು ಕಡ್ಡಾಯವಾಗಿ ಇರಬೇಕು. ಈ ಬದಲಾವಣೆಗೆ ಅಗತ್ಯ ಕ್ರಮವಹಿಸಬೇಕು ಎಂದು ಸರ್ಕಾರಕ್ಕೆ ಕೋರಿದರು.
ಜಿಲ್ಲಾ ಕೇಂದ್ರದಲ್ಲಿ ವ್ಯಾಪಕ ಬೆಂಬಲ: ಭಾರತೀಯ ವೈದ್ಯಕೀಯ ಸಂಘದ ಕರೆಯಂತೆ ಜಿಲ್ಲಾಸ್ಪತ್ರೆಯಲ್ಲೂ ಫಿಜಿಷಿಯನ್, ದಂತ, ಕೀಲು-ಮೂಳೆ, ಚರ್ಮ, ಮಕ್ಕಳ ವಿಭಾಗ ಸೇರಿ ಇನ್ನಿತರೆ ರೋಗಗಳ ಒಪಿಡಿ ಸೇವೆ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳು ಕೂಡ ಇದಕ್ಕೆ ಹೊರತಾಗಿರಲಿಲ್ಲ. ಹೀಗಾಗಿ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ರೋಗಿಗಳಿಗೆ ಹೆಚ್ಚಿನ ತೊಂದರೆಯಾಗಿಲ್ಲ: ಜಿಲ್ಲಾಸ್ಪತ್ರೆಯಲ್ಲಿ ಒಪಿಡಿ ಬಂದ್ ಆಗಿದ್ದರೂ ತುರ್ತು ಸೇವಾ ವಿಭಾಗದಲ್ಲಿ ಕೆಲ ವೈದ್ಯರು ಕಾರ್ಯನಿರ್ವಹಿಸಿದರು. ಮುಷ್ಕರ ಇರುವುದು ಅನೇಕರಿಗೆ ತಿಳಿದಿದ್ದರಿಂದ ಹಲವು ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಇತ್ತು. ಹೀಗಾಗಿ ಹೆಚ್ಚಿನ ತೊಂದರೆ ಉಂಟಾಗಲಿಲ್ಲ.
ಡಾ.ಪ್ರಶಾಂತ್, ಡಾ.ರಾಜೇಶ್, ಡಾ.ನಾಗೇಂದ್ರಗೌಡ, ಡಾ.ಚಂದ್ರಶೇಖರ್, ಡಾ.ಲತಾ, ಡಾ.ತಿಮ್ಮೇಗೌಡ, ಡಾ.ಮೇಘಾ, ಡಾ.ಅಶ್ವಿನಿ ಸೇರಿ ನೂರಾರು ವೈದ್ಯರಿದ್ದರು.