ಜಿಲ್ಲೆ

ಮನುಷ್ಯನಿಗೆ ಪಂಚೇಂದ್ರಿಯಗಳು ಬಹುಮುಖ್ಯ

ಚಾಮರಾಜನಗರ: ಗ್ರಾಮೀಣ ಪ್ರದೇಶದಲ್ಲಿ ಕಣ್ಣಿನ ತಪಾಸಣೆ ಮತ್ತು ಇನ್ನಿತರೆ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡುವುದು ಅತ್ಯಂತ ಸಹಕಾರಿಯಾಗಿದೆ ಎಂದು ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ದೊಡ್ಡರಾಯಪೇಟೆ ಗ್ರಾಮದಲ್ಲಿ ಎಆರ್‌ಎಸ್ ಟ್ರಸ್ಟ್, ಕಾವೇರಿ ಡೆಂಟಲ್ ಮತ್ತು ಓರಲ್ ಮೆಡಿಸನ್ ಹಾಗೂ ಅರವಿಂದ ಕಣ್ಣಾಸ್ಪತ್ರೆ ಕೊಯಮತ್ತೂರು ಸಹಯೋಗದಲ್ಲಿ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಆರ್‌ಎಸ್ ಟ್ರಸ್ಟ್ ವತಿಯಿಂದ ಕಳೆದ 4 ವರ್ಷಗಳಿಂದಲೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಇದು ಗ್ರಾಮೀಣ ಭಾಗದ ಜನರಿಗೆ ಅತ್ಯಂತ ಸಹಕಾರಿಯಾಗಿದೆ. ತಮ್ಮ ತಂದೆ-ತಾಯಿಯ ನೆನಪಿನಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಮನುಷ್ಯನಿಗೆ ಪಂಚೇಂದ್ರಿಯಗಳು ಬಹಳ ಮುಖ್ಯವಾಗಿದೆ. ಅದರಲ್ಲೂ ಕಣ್ಣು ಬಹುಮುಖ್ಯವಾದ ಅಂಗವಾಗಿದೆ. ಬದಲಾದ ದಿನಮಾನದಲ್ಲಿ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿ ಕಾನೀಸಿಕೊಳ್ಳುತ್ತಿದೆ. ಗ್ರಾಮೀಣ ಭಾಗದ ಹಿರಿಯರಿಗೆ ಕಣ್ಣಿನ ಪೊರೆ ದೊಡ್ಡ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಇಂತಹ ಶಿಬಿರಗಳು ಸಾರ್ವಜನಿಕರಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 2023-24 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕಪಡೆದ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಣ್ಣಿನ ತಪಾಸಣಾ ಶಿಬಿರದಲ್ಲಿ 120 ಜನರು ಭಾಗಿಯಾಗಿ ತಪಾಸಣೆ ಮಾಡಿಸಿಕೊಂಡರು. ಶಸ ಚಿಕಿತ್ಸೆಗೆ 48 ಜನರನ್ನು ಆಯ್ಕೆ ಮಾಡಲಾಯಿತು. ಅವರನ್ನು ಕೊಯಮತ್ತೂರಿನ ಕಣ್ಣಾಸ್ಪತ್ರೆಗೆ ಶಸ ಚಿಕಿತ್ಸೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪೂರ್ವ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ದಿವಾಕರ್, ಎಆರ್‌ಎಸ್ ಟ್ರಸ್ಟ್ ಗೌರವಾಧ್ಯಕ್ಷೆ ಎಚ್.ಕೆ.ಯಶೋಧಮ್ಮ, ಅಧ್ಯಕ್ಷ ಡಾ.ಆರ್.ಕೃಪಾಶಂಕರ್, ವಕೀಲ ಅರುಣ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದರಾಜು, ಮಹೇಶ್ವರಿ, ನಾಗೇಂದ್ರ, ಯಜಮಾನರಾದ ರಾಜಣ್ಣ, ಮಹದೇವಯ್ಯ, ಮಹದೇವಸ್ವಾಮಿ, ಗ್ರಾ.ಪಂ ಮಾಜಿ ಅಧ್ಯಕ್ಷ ಬಸವರಾಜು, ಶಿವಶಂಕರ್, ಆಟೋ ರಾಜು ಹಾಗೂ ಇತರರು ಹಾಜರಿದ್ದರು.