ಜಿಲ್ಲೆ

ಮನುಷ್ಯನ ಸೇಡಿಗೆ ಕಾಡು ಪ್ರಾಣಿಗಳು ಬಲಿ

ಗುಂಡ್ಲುಪೇಟೆ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 5 ಹುಲಿಗಳಿಗೆ ವಿಷ ಹಾಕಿ ಕೊಂದ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದ್ದರೆ ಇಂಥಾ ಹಲವು ಪ್ರಕರಣಗಳು ಹಿಂದಿನಿಂದಲೂ ಬಂಡೀಪುರ ಸುತ್ತಮುತ್ತಲೂ ಸಂಭವಿಸುತ್ತಿದ್ದ ಬಗ್ಗೆ ಹಿರಿಯರು ಮಾತನಾಡುತ್ತಿದ್ದಾರೆ.

25-30 ವರ್ಷಗಳ ಹಿಂದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೇ ರೀತಿ ಹುಲಿ, ಚಿರತೆಗಳಿಗೆ ವಿಷ ಹಾಕುವ ಪ್ರವೃತ್ತಿ ಚಾಲ್ತಿಯಲ್ಲಿತ್ತು. ಬಹಳ ವರ್ಷಗಳಿಂದಲೂ ಜಾನುವಾರುಗಳು ಮೇವಿಗಾಗಿ ಅರಣ್ಯವನ್ನೇ ಅವಲಂಬಿಸುತ್ತಿದ್ದವು. ಈ ಸಂದರ್ಭದಲ್ಲಿ ಒಮ್ಮೊಮ್ಮೆ ಹುಲಿ ಚಿರತೆಗಳಿಗೆ ಬಲಿಯಾಗುತ್ತಿದ್ದವು. ರೈತರು ತಮ್ಮ ರಾಸುಗಳನ್ನು ಕೊಂದ ಪ್ರಾಣಿಯ ಮೇಲೆ ಸೇಡು ತೀರಿಸಿಕೊಳ್ಳಲು ವಿಷಹಾಕುತ್ತಿದ್ದರು.

ಆದರೆ ಇತ್ತೀಚೆಗೆ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿದ ನಂತರ ಕಾಡಂಚುಗಳಲ್ಲಿ ಕಂದಕ, ಸೋಲಾರ್ ಬೇಲಿ ಅಳವಡಿಸಿ ಗಸ್ತು ಹೆಚ್ಚಿಸಲಾಗಿದೆ. ಜಾನುವಾರುಗಳು ಆಹಾರಕ್ಕಾಗಿ ಕಾಡಿನೊಳಗೆ ಹೋಗುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಅಕಸ್ಮಾತ್ ಮೇಯಲು ಕಾಡಿನೊಳಗೆ ಹೋದ ಜಾನುವಾರು ವನ್ಯಜೀವಿ ದಾಳಿಗೆ ಬಲಿಯಾದರೆ ಅರಣ್ಯ ಇಲಾಖೆ ಪರಿಹಾರವನ್ನೂ ನೀಡುವುದಿಲ್ಲ. ಅಲ್ಲದೆ ವನ್ಯಜೀವಿ ದಾಳಿಯಿಂದ ಸಾವಿಗೀಡಾದ ಜಾನುವಾರುಗಳಿಗೆ ಅರಣ್ಯ ಇಲಾಖೆ ಕೊಡುತ್ತಿದ್ದ ಪರಿಹಾರದ ಮೊತ್ತವೂ ಕಡಿಮೆಯಾಗಿದ್ದು, ಇದನ್ನು ಪಡೆಯಲು ಪರದಾಡುವಂತಾಗಿತ್ತು. ಇದರಿಂದ ಬೇಸತ್ತ ರೈತರು ವಿಷ ಹಾಕುವ ಮೂಲಕ ತಮ್ಮ ಸೇಡು ತೀರಿಸಿಕೊಳ್ಳುತ್ತಿದ್ದರು. ಅಲ್ಲದೆ ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಜತೆಗೆ ಜಗಳವಾಡುತ್ತಿದ್ದರು.

31 ವರ್ಷಗಳ ಹಿಂದೆ ಬೆಂಗಳೂರಿನ ಯಾಂತ್ರಿಕ ಜೀವನದಿಂದ ಬೇಸತ್ತು ಬಂಡೀಪುರದ ಮಂಗಲ ಗ್ರಾಮಕ್ಕೆ ಆಗಮಿಸಿದ ಚಿತ್ರ ಕಲಾವಿದೆ ಸುನಿತಾ ಎನ್ನುವವರು ಕಾಡಂಚಿನ ಜನರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಹಾಗೂ ಮನಸ್ಥಿತಿಗಳನ್ನು ಅರ್ಥ ಮಾಡಿಕೊಂಡರು. ಪ್ರತಿ ದಿನವೂ ಕಾಡಂಚಿನಲ್ಲಿ ನಡೆಯುತ್ತಿದ್ದ ಮಾನವ ವನ್ಯಜೀವಿ ಸಂಘರ್ಷಗಳನ್ನು ಹತ್ತಿರದಿಂದ ನೋಡಿದರು. ಜಾನುವಾರು ಕಳೆದುಕೊಂಡವರು ಸೇಡಿಗಾಗಿ ವನ್ಯಜೀವಿಗಳಿಗೆ ವಿಷ ಹಾಕುತ್ತಿದ್ದ ಬಗ್ಗೆ ಮನವರಿಕೆ ಮಾಡಿಕೊಂಡರು. ಇತ್ತ ವನ್ಯಜೀವಿಗಳೂ ಉಳಿಯಬೇಕು, ರೈತರಿಗೂ ಬದುಕಾಗಬೇಕು ಎಂಬ ಉದ್ದೇಶದಿಂದ ಶ್ರೀಮರಿಯಮ್ಮ ಚಾರಿಟಬಲ್ ಟ್ರಸ್ಟ್ ಎನ್ನುವ ಸ್ವಯಂ ಸೇವಾ ಸಂಸ್ಥೆಯನ್ನು ತೆರೆದು ವನ್ಯಜೀವಿಯಿಂದ ಸಾವಿಗೀಡಾದ ರಾಸುವಿನ ಮಾಲೀಕರಿಗೆ ಟ್ರಸ್ಟ್ ಮೂಲಕ ಕೂಡಲೇ ತಮ್ಮ ಕೈಲಾದ ಮಟ್ಟಿಗೆ ಪರಿಹಾರ ನೀಡುತ್ತಾ ಬಂದಿದ್ದಾರೆ. ಇದರಿಂದ ಹತಾಶೆಗೊಳಗಾದ ರೈತರಲ್ಲಿದ್ದ ಸೇಡಿನ ಮನೋಭಾವ ಬದಲಿಸುವಂತಾಗಿದೆ.

ಸಂಸ್ಥೆಯು ಕಳೆದ 18 ವರ್ಷಗಳಲ್ಲಿ 1 ಕೋಟಿ 22 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಿದೆ. ಹುಲಿ ಸಂರಕ್ಷಿತ ಪ್ರದೇಶಗಳಾದ ನಾಗರಹೊಳೆ ಬಂಡೀಪುರ, ಸಮೀಪದ ಮಧುಮಲೈ ವ್ಯಾಪ್ತಿಯ 545 ಗ್ರಾಮಗಳಲ್ಲಿ 3788 ಪ್ರಕರಣಗಳಿಗೆ ಪರಿಹಾರವನ್ನು ನೀಡಿದ್ದಾರೆ. ಸುನಿತಾರ ಈ ಕೆಲಸದಿಂದ ನಾಗರಹೊಳೆ, ಬಂಡೀಪುರ ಮತ್ತು ಮಧುಮಲೈ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳಿಗೆ ವಿಷಹಾಕುವ ಪ್ರವೃತ್ತಿ ಸಂಪೂರ್ಣ ನಿಂತುಹೋಗಿದೆ.

ಕೊರತೆಯಾದ ಅನುದಾನ:

ಪ್ರಕರಣಗಳು ಹೆಚ್ಚಿದಂತೆಲ್ಲಾ ಹೆಚ್ಚಿನ ಹಣದ ಅಗತ್ಯವುಂಟಾಗಿದ್ದರಿದ ತಮ್ಮ ಸಂಬಂಧಿಕರಿಂದ ನೆರವು ಪಡೆದುಕೊಂಡರು. ಅಲ್ಲದೆ ಟೆಂಪಲ್ ಟ್ರೀ ಡಿಸೈನ್ ಎನ್ನುವ ಸಂಸ್ಥೆಯನ್ನು ತೆರೆದು ಮೇಲುಕಾನಮಹಳ್ಳಿ, ಗೋಪಾಲಸ್ವಾಮಿ ಬೆಟ್ಟದ ತಪ್ಪಲು ಮುಂದಾತ ಕಡೆಗಳಲ್ಲಿ ಪರಿಸರ ಪ್ರೇಮಿಗಳು ಇಷ್ಟಪಡುವಂಥಾ ಟೀಷರ್ಟ್, ಕೀಚೈನ್, ಕ್ಯಾಪ್ ಮುಂತಾದ ವಸ್ತುಗಳ ಮಾರಾಟ ಮಳಿಗೆಗಳನ್ನು ತೆರೆದು ಮಾರಾಟ ಮಾಡುವ ಮೂಲಕ ನಿಧಿ ಸಂಗ್ರಹಿಸುತ್ತಿದ್ದಾರೆ.

ಸೇಡಿಗೆ ಮಾತ್ರವಲ್ಲ ಕಳ್ಳಬೇಟೆಗೂ ವಿಷ ಸಿಂಪಡನೆ:

ವನ್ಯಜೀವಿಯ ಚರ್ಮ, ಉಗುರು ಹಾಗೂ ಹಲ್ಲುಗಳಿಗಾಗಿ ಕಳ್ಳಬೇಟೆಗಾರರು ಮೃತ ರಾಸಿನ ಮೈಮೇಲೆ ವಿಷ ಸಿಂಪಡಿಸಿ ಕೊಲ್ಲುವ ಪ್ರವೃತ್ತಿ ಬಳಕೆಯಲ್ಲಿತ್ತು. ಸಾವಿಗೀಡಾದ ವನ್ಯಜೀವಿಯ ಚರ್ಮ, ಉಗುರು ಹಾಗೂ ಹಲ್ಲುಗಳನ್ನು ಪ್ರತ್ಯೇಕಿಸಿ ಮಾರಾಟ ಮಾಡುವ ಜಾಲ ಇತ್ತೀಚಿನ ವರ್ಷಗಳವರೆಗೂ ಕಾರ್ಯನಿರ್ವಹಿಸುತ್ತಿತ್ತು.

ಕಳೆದ 15 ವರ್ಷಗಳವರೆಗೂ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳಿಗೆ ವಿಷವಿಕ್ಕುವ ಕೆಲಸ ಮಾಡುತ್ತಿದ್ದರು. ಇದರ ಲಾಭ ಪಡೆದ ಕಳ್ಳಬೇಟೆಗಾರರು ಸತ್ತ ವನ್ಯಜೀವಿಗಳ ಚರ್ಮ, ಉಗುರು ಹಾಗೂ ಹಲ್ಲುಗಳನ್ನು ಮಾರಾಟ ಮಾಡುತ್ತಿದ್ದರು. ತಾವು ಜಿಲ್ಲಾ ಪೊಲೀಸ್ ವಿಶೇಷ ತಂಡದಲ್ಲಿ ಕೆಲಸ ಮಾಡುತ್ತಿದ್ದಾಗ ಹುಲಿ ಹಾಗೂ ಚಿರತೆಗಳ ಚರ್ಮ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಮಾಲು ಸಮೇತ ಬಂಧಿಸಿ ವಿಚಾರಣೆ ನಡೆಸಿದಾಗ ಬಂಡೀಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿಷ ಹಾಕಿ ಕೊಂದಿದ್ದ ಬಗ್ಗೆ ಒಪ್ಪಿಕೊಂಡಿದ್ದರು.

ಎ.ಮಹದೇವ, ನಿವೃತ್ತ ಸಹಾಯಕ ಸಬ್ ಇನ್ಸ್‌ಪೆಕ್ಟರ್

ಅರಣ್ಯ ಇಲಾಖೆ ಕೊಡುವ ಪರಿಹಾರ ಕಡಿಮೆಯಾಗಿದ್ದರೂ ಸುನಿತಾ ಅವರು ತಮ್ಮ ಟ್ರಸ್ಟ್ ಮೂಲಕ ಕೂಡಲೇ ಸಂತ್ರಸ್ಥರಿಗೆ ಪರಿಹಾರ ಕೊಡುವುದರಿಂದ ರೈತರಿಗೆ ಆಗುತ್ತಿದ್ದ ನಷ್ಟ ಕಡಿಮೆಯಾಗಿದೆ. ಅಲ್ಲದೆ ಕಾಡಂಚಿನಲ್ಲಿ ಸೇಡಿಗಾಗಿ ವಿಷ ಹಾಕುತ್ತಿದ್ದ ಪ್ರಕರಣಗಳು ನಿಂತುಹೋಗಿವೆ.

ಎನ್.ಪಿ.ನವೀನ್ ಕುಮಾರ್, ಬಂಡೀಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ.