ಚಾಮರಾಜನಗರ: ಮನುಷ್ಯನ ಪರಿಪೂರ್ಣತೆಗೆ ವಿವಿಧ ಬಗೆಯ ಸಾಹಿತ್ಯ ಸಹಕಾರಿಯಾಗಿದ್ದು, ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ ಸಾಹಿತ್ಯ ಮನುಷ್ಯನ ಪರಿಪೂರ್ಣತೆಗೆ ಹೊಸ ಅನುಭವವನ್ನು ಉಂಟು ಮಾಡುತ್ತದೆ ಎಂದು ಹಿರಿಯ ಕನ್ನಡ ಚಳುವಳಿಗಾರ ರಾಜಗೋಪಾಲ್ ಹೇಳಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಋಗ್ವೇದಿ ಯೂತ್ ಕ್ಲಬ್ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್.ಎಲ್.ಭೈರಪ್ಪನವರ ಸಾಹಿತ್ಯ ಕೊಡುಗೆಗಳು ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
95 ವಸಂತಗಳ ದಿವ್ಯ ಕಾಲವನ್ನು ಸಾಹಿತ್ಯ ರಚನೆಗೆ ಮೀಸಲಿಟ್ಟ ಭೈರಪ್ಪನವರು ಕನ್ನಡಿಗರ ಮನೆಮನೆಯ ಸಾಹಿತಿಯಾಗಿದ್ದಾರೆ. ಭೈರಪ್ಪನವರ ಪುಸ್ತಕಗಳು ವಿಶೇಷವಾಗಿದ್ದು, ಅವರ ಎಲ್ಲಾ ಸಾಹಿತ್ಯಗಳು ಹೊಸ ಅನುಭವ ಉಂಟುಮಾಡುತ್ತದೆ ಎಂದರು.
ಸಂಸ್ಕೃತಿ ಚಿಂತಕ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಬ್ರಹ್ಮಾಂಡದ ದಿವ್ಯ ಚಿಂತನೆಗಳನ್ನು, ತತ್ವಗಳನ್ನು ತಮ್ಮ ಅನುಭವ, ಅಧ್ಯಯನದ ಮೂಲಕ ಸಾಹಿತ್ಯ ರೂಪದಲ್ಲಿ ನೀಡುತ್ತಿರುವ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್.ಎಲ್.ಭೈರಪ್ಪನವರು ವಿಶ್ವದ ಶ್ರೇಷ್ಠ ಸಾಹಿತಿಯಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಾನಪದ ಗಾಯಕ ಸುರೇಶ್ ನಾಗ್, ಕನ್ನಡ ಸಾಹಿತ್ಯ ಪರಿಷತ್ತಿನ ಬಿ.ಕೆ.ಆರಾಧ್ಯ, ಶಿವಲಿಂಗ ಮೂರ್ತಿ ,ಸರಸ್ವತಿ, ರವಿಚಂದ್ರಪ್ರಸಾದ್, ಮಹೇಶ್, ಕುಮಾರ್, ಅರವಿಂದ್, ಮೋಹನ್, ಮಾದೇಶ್ ಶೆಟ್ಟಿ, ಲೋಕೇಶ್ ನಾಯ್ಕ ,ಮೃತ್ಯುಂಜಯ ಇನ್ನಿತರರಿದ್ದರು.