ಜಿಲ್ಲೆ

ಮನುಷ್ಯನ ದುಃಖಕ್ಕೆ ಬುದ್ಧನಿಂದ ಪರಿಹಾರ ಮಾರ್ಗ

ಮನುಷ್ಯ ಇಂದ್ರಿಯಗಳಿಂದ ದುಃಖಕ್ಕೆ ಸಿಲುಕಿದ್ದಾನೆ ಎಂಬುದನ್ನು ಅರಿತ ಬುದ್ಧ ಅದಕ್ಕೆ ಪರಿಹಾರ ಮಾರ್ಗ ಕಂಡುಹಿಡಿದರು ಎಂದು ಕೊಳ್ಳೇಗಾಲ ಮಧುವನಹಳ್ಳಿಯ ಸಿರಿ ಮಹಾಬೋಧಿ ಬುದ್ಧ ವಿಹಾರದ ಭಿಕ್ಕು ಬೋಧಿ ಪ್ರಜ್ಞಾನಂದ ಭಂತೇಜಿ ಹೇಳಿದರು.


ಬುದ್ಧ ಪೂರ್ಣಿಮೆಯ ಅಂಗವಾಗಿ ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪ್ರಸ್ತುತ ಕಾಲಕ್ಕೆ ಬುದ್ಧ ಅನಿವಾರ್ಯ’ ಕುರಿತು ಉಪನ್ಯಾಸ ನೀಡಿದರು.


ಕ್ಲೇಶ ಕಳೆದುಕೊಂಡರೆ ಜ್ಞಾನ ಉದಯವಾಗುತ್ತದೆ. ಇದೇ ಜೀವನದ ಅಡಿಪಾಯ. ಜೀವನ ನಡೆಸುವುದಲ್ಲ. ನಿಬ್ಬಾಣ ಸ್ಥಿತಿಗೆ ಹೋಗುವುದು. ಅದೇ ಬುದ್ಧ ಧಮ್ಮದ ತಿರುಳು. ಬುದ್ಧ ಜ್ಞಾನ ಅನಂತ ಸಾಗರ. ಲೋಕದ ಮಹಾತ್ಮರಾದವರು ಎಂದರು.
ನಾವು ಹೊಲದಲ್ಲಿ ರಾಗಿ ಬಿತ್ತನೆ ಮಾಡುತ್ತೇವೆ. ಕಳೆ ಎಲ್ಲಿಂದ ಬಂದಿತು? ಯೋಚನೆ ಮಾಡಬೇಕು. ನಮ್ಮ ನಿರ್ಮಲವಾದ ಮನಸ್ಸಿಗೂ ಕಳೆ ಎಂಬ ಅನೇಕ ಕ್ಲೇಶಗಳು ಬರುತ್ತವೆ. ಇವುಗಳನ್ನು ನಿಯಂತ್ರಿಸಬೇಕು. ಬುದ್ಧನಡೆಗೆ ಬಂದಾಗ ನಮ್ಮ ಜ್ಞಾನ ವಿಕಾಸವಾಗುತ್ತದೆ ಎಂದರು.


ಲೋಕದಲ್ಲಿ ದುಃಖವೇ ತುಂಬಿದೆ. ತಾಯಿಯ ಗರ್ಭದಿಂದ ಯಾರಾದರೂ ಬಹಳ ಸಂತೋಷದಿಂದ ಬಂದಿರುವರೇ? ದುಃಖದಿಂದಲೇ ಬಂದಿರುವುದು. ತನ್ನ ಬಯಕೆ ಈಡೇರಿಸಲು ಯತ್ನಿಸಿದಾಗ ದುಃಖ ಉತ್ಪತ್ತಿಯಾಯಿತು ಎಂದರು.


ಭವ ಸಾಗರದಲ್ಲಿ ವಿಮೋಚನೆ ದೊರೆಯಬೇಕಾದರೆ ಬುದ್ಧರ ಅಷ್ಟಾಂಗ ಮಾರ್ಗ ಅನುಸರಿಸಬೇಕು. ಇದು ಕಷ್ಟವಲ್ಲ. ಅದು ನಮ್ಮೊಳಗೆ ಅಂಟಿಕೊಂಡಿದೆ. ಈ ಅಂಟುವಿಕೆಯನ್ನು ಬಿಡಿಸಿಕೊಳ್ಳಬೇಕು. ಬೋಧಿ ಪ್ರಜ್ಞಾ ಎನ್ನುವುದೇ ಎಲ್ಲದರಿಂದ ಬಿಡುಗಡೆ ಪಡೆಯುವುದು. ನಾನು ಎಂಬುದು ಹೋದಾಗ ನಿಬ್ಬಾಣ ಪ್ರಾಪ್ತಿಯಾಗುತ್ತದೆ ಎಂದು ತಿಳಿಸಿದರು.


ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಮೈಸೂರು ವಿವಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬುದ್ಧ ಅಧ್ಯಯನ ಕೇಂದ್ರ ಮಾಡಲು ಪ್ರಯತ್ನ ಮಾಡಲಾಗುವುದು. ಬುದ್ಧ ಮೊದಲ ಬಾರಿಗೆ ಪ್ರಭುತ್ವದ ಬೀಜ ಬಿತ್ತಿದವರು. ಅದರನ್ನು ಉತ್ತಮ ಫಸಲಗಳನ್ನು ಪಡೆದಾಗ ಮಾತ್ರ ನಮ್ಮದು ಪ್ರಬುದ್ಧ ಭಾರತವಾಗುತ್ತದೆ. ಜಾಗತಿಕ ಮಟ್ಟದಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ. ಯುವ ಸಮೂಹ ಬುದ್ಧ ಮಾರ್ಗದಲ್ಲಿ ಆರೋಗ್ಯಕರ ಸಮಾಜವನ್ನು ಕಟ್ಟಲು ಮುಂದಾಗಬೇಕು ಎಂದರು.


ಜಾಗತಿಕ ಮಟ್ಟದಲ್ಲಿ ಶಾಂತಿ ಸ್ಥಾಪನೆಗಾಗಿ ಬುದ್ಧ ಮಾರ್ಗ ಅಗತ್ಯ. ಪ್ರಾಚೀನ ಕಾಲದಿಂದಲೂ ಭಾರತ ವಿಶೇಷ ಸ್ಥಾನ ಪಡೆಯಲು ಬುದ್ಧನ ಚಿಂತನೆ ಕಾರಣ. ಜ್ಞಾನದ ಕಡೆಗೆ ಸಾಗಲು ಬುದ್ಧ ಚಿಂತನೆ ಅಗತ್ಯ. ಅವರ ಚಿಂತನೆಗಳು ಎಲ್ಲ ಕಾಲಕ್ಕೂ ಸಾರ್ವತ್ರಿಕ ಎಂದರು.


ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಎಸ್. ನರೇಂದ್ರಕುಮಾರ್, ಪ್ರಾಧ್ಯಾಪಕ ಪ್ರೊ.ಜೆ. ಸೋಮಶೇಖರ್ ಪಾಲ್ಗೊಂಡಿದ್ದರು.