ಜಿಲ್ಲೆ

ಮನುಷ್ಯನ ಆಲೋಚನಾ ಶಕ್ತಿಯೇ ಪ್ರಧಾನ

ಎಚ್.ಡಿ.ಕೋಟೆ: ಸಾಹಿತ್ಯ ಕ್ಷೇತ್ರಕ್ಕೆ ಜಾನಪದದ ಕೊಡಗೆ ಅಪಾರವಾಗಿದೆ ಎಂದು ಸಾಹಿತಿ ಡಾ.ಕಿರಣ್ ಸಿಡ್ಲೆಹಳ್ಳಿ ತಿಳಿಸಿದರು.

ಪಟ್ಟಣದ ಶ್ರೀ ವಿಶ್ವಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿದ್ವಾನ್ ಎಂ.ಜಿ ನಂಜುಂಡಾರಾಧ್ಯರ ದತ್ತಿ ಉಪನ್ಯಾಸ ಕಾರ್ಯಕ್ರಮಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯ ಮೊದಲಿಗೆ ಕಾವ್ಯಗಳಲ್ಲಿ ಉಗಮವಾಯಿತು. ಆ ನಂತರ ಗದ್ಯ ಪ್ರಬಂಧ ಲಲಿತ ಪ್ರಬಂಧಗಳು ಬಂದವು. ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳು ಕೂಡ ಸಾಹಿತ್ಯದ ಮೂಲಕವೇ ರಚನೆ ಆಗಿರುವುದು. ಹಾಗಾಗಿ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಮನುಷ್ಯನ ಆಲೋಚನ ಶಕ್ತಿಯೇ ಪ್ರಧಾನವಾದದ್ದು ಎಂದು ಹೇಳಿದರು.

ಸಾಹಿತ್ಯವನ್ನು ಬದುಕಿನಿಂದ ನಾವು ಬೇರೆ ನೋಡಲೇ ಇಲ್ಲ. ನಮ್ಮ ಹಿರಿಯ ಕವಿಗಳು ಬರೆದಂತೆ ಬದುಕಿದರು, ಬದುಕಿದಂತೆ ಬರೆದರು ಅದು ಶ್ರೇಷ್ಠ ಸಾಹಿತ್ಯವಾಯಿತು. ಮೊದಲಿಗೆ ಜನಪದ, ಮಹಾಕಾವ್ಯ, ವಚನ ಸಾಹಿತ್ಯ, ದಾಸ ಸಾಹಿತ್ಯ ಹೊಸಗನ್ನಡ ಹೀಗೆ ಕನ್ನಡ ಸಾಹಿತ್ಯ ಬೆಳೆದು ಬಂದ ಬಗೆಯನ್ನು ವಿವರವಾಗಿ ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಓದಿನ ಜತೆಗೆ ತಾಲೂಕಿನಲ್ಲಿರುವ ಐತಿಹಾಸಿಕ ಹಿನ್ನೆಲೆ ಮತ್ತು ಪ್ರಮುಖ ಸ್ಥಳಗಳ ವೈಶಿಷ್ಟ್ಯತೆ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಮುಖ್ಯಮಂತ್ರಿ ಪದಕ ಪುರಸ್ಕಾರ ಪಡೆದ ಗುಪ್ತಚಾರ ವಿಭಾಗದ ಮುಖ್ಯಪೇದೆ ರಮೇಶ್ ರಾವ್ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಾವು ಶಿಕ್ಷಣ ಪಡೆಯುವ ಸಂದರ್ಭದಲ್ಲಿ ತುಂಬ ಕಷ್ಟವಿತ್ತು. ಆದರೆ ನಿಮಗೆ ಎಲ್ಲ ಸೌಲಭ್ಯಗಳಿದ್ದು, ನಿಮ್ಮ ತಂದೆ ತಾಯಿ ನಿಮ್ಮ ಬಗ್ಗೆ ಕನಸು ಕಟ್ಟಿ ಕೊಂಡಿರುತ್ತಾರೆ. ಅದನ್ನು ಈಡೇರಿಸಲು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಎಂ.ಶಿವಮ್ಮ ಕೃಷ್ಣನಾಯಕ, ಕಾಲೇಜಿನ ಪ್ರಾಂಶುಪಾಲರಾದ ಡಾ.ಕುಮಾರಸ್ವಾಮಿ, ಉಪನ್ಯಾಸಕರಾದ ಬಸಪ್ಪ, ರಮೇಶ, ಕಸಾಪ ಗೌರವ ಕಾರ್ಯದರ್ಶಿ ಮಾ.ಶಿ.ಗಿರೀಶ್ ಮೂರ್ತಿ, ಸದಸ್ಯರಾದ ಸ್ವಾಮಿ, ರಘುರಾಮ್, ಚಾಕಹಳ್ಳಿ ಕೃಷ್ಣನಾಯಕ ಇತರರಿದ್ದರು.