ಜಿಲ್ಲೆ

ಮನುಷ್ಯ ಧರ್ಮ ಸಾರ್ವಕಾಲಿಕವಾದದ್ದು: ಪ್ರೊ. ಹಿ.ಶಿ. ರಾಮಚಂದ್ರೇಗೌಡ

ಹಾಸನ: ಮನುಷ್ಯ ಧರ್ಮ ಸಾರ್ವಕಾಲಿಕವಾದದ್ದು, ಬದಲಾವಣೆಯನ್ನು ನೀಡುವವರೇ ನಿಜವಾದ ಸಾಧಕರು ಎಂದು ಬೆಂಗಳೂರು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಪ್ರೊ. ಹಿ.ಶಿ. ರಾಮಚಂದ್ರೇಗೌಡ ಅಭಿಪ್ರಾಯಪಟ್ಟರು.

ನಗರದ ಕಲಾ ಕಾಲೇಜಿನ ಮಿನಿ ಸಭಾಂಗಣದಲ್ಲಿ ಸೋಮವಾರ ಬೆಂಗಳೂರು ಕರ್ನಾಟಕ ಜಾನಪದ ಪರಿಷತ್, ಹಾಸನ ಜಿಲ್ಲಾ ಘಟಕ ಮತ್ತು ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನ ಕನ್ನಡ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಹಾಸನದ ವ್ಯಕ್ತಿತ್ವ ನುಡಿನಮನ ದಿ. ಡಾ. ಎಚ್.ಜೆ. ಲಕ್ಕಪ್ಪಗೌಡರು ಮತ್ತುಡಾ. ರಾಜೇಗೌಡ ಹೊಸಹಳ್ಳಿ ಅವರ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯ ಓದುವುದು ಎಂದರೆ ಸಮಾಜ ಮತ್ತು ಸಂಸ್ಕೃತಿಯನ್ನು ಓದುವಂತಹದ್ದಾಗಿದೆ. ಐಚ್ಛಿಕ ಕನ್ನಡ ಓದುವ ವಿದ್ಯಾರ್ಥಿಗಳು ಪುಣ್ಯವಂತರು. ಯಾವ ಕೆಲಸ ಮಾಡಿದರೂ ಕೂಲಿನೆ. ವಿಜ್ಞಾನ ವಸ್ತುಗಳ ಜೊತೆ ಮಾತನಾಡುತ್ತದೆ ಸಮಾಜ-ವಿಜ್ಞಾನ ಮನುಷ್ಯನ ಜೊತೆ ಮಾತನಾಡುತ್ತದೆ.


ಕರ್ನಾಟಕದಲ್ಲಿ ಸಮಾಜ ಮತ್ತು ಧಾರ್ಮಿಕ ಚಿಂತನೆಗೆ ಬಂದರೆ ಬುದ್ಧ ಮಾದರಿಯಾಗುತ್ತಾರೆ. ಶೋಧನೆ ಮಾಡಿ ಸಾಮಾಗ್ರಿಗಳನ್ನು ಕೊಟ್ಟ ಮೇಲೆಯೇ ತಾನೆ ಮುಂದಿನ ಬೆಳವಣಿಗೆ ಸಾಧ್ಯವಾಗುವುದು. ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಸೇರಿದಂತೆ ಮಹನೀಯರು ಅವರದೇ ಆದ ರೀತಿಯಲ್ಲಿ ಮಹನೀಯರಾದವರು. ಕುವೆಂಪು ಅವರು ತುಳಿತಕ್ಕೊಳಗಾದವರ ಬಗ್ಗೆ, ದಲಿತರ, ಹೆಣ್ಣು ಮಕ್ಕಳ ಬಗ್ಗೆ ಬರೆಯುವುದರ ಮೂಲಕ ಮಹಿಳೆಯರಿಗೆ ಗಂಡಸರಿಗೆ ಸಮಾನ ಪಾತ್ರವನ್ನು ಕಟ್ಟಿಕೊಟ್ಟವರು. ಸಮಾಜಕ್ಕೆ ನೆಲೆಯನ್ನು ನೀಡಿದವರನ್ನ ನಾವು ಸಾಧಕರು ಎಂದು ಕರೆಯುತ್ತೇವೆ. ಈ ಸಂದರ್ಭದಲ್ಲಿ ದಿ. ಡಾ. ಎಚ್.ಜೆ. ಲಕ್ಕಪ್ಪಗೌಡರು ಮತ್ತುಡಾ. ರಾಜೇಗೌಡ ಹೊಸಹಳ್ಳಿ ಅವರ ವ್ಯಕ್ತಿತ್ವವನ್ನು ನೆನೆದು ಸ್ಮರಿಸಿದರು.


ಡಾ. ಎಚ್.ಜೆ. ಲಕ್ಕಪ್ಪಗೌಡರನ್ನು ಕುರಿತು ಸಾಹಿತಿ ಮೇಟಿಕೆರೆ ಹಿರಿಯಣ್ಣ ಮಾತನಾಡಿ, ಮಹನೀಯರ ಚಿಂತನೆಗಳನ್ನು ನಾವು ಅಳವಡಿಸಿಕೊಳ್ಳುತ್ತೇವೆ. ಕಲಿಕೆಯ ಆಸಕ್ತಿ ಪ್ರತಿಯೊಬ್ಬರಲ್ಲಿಯೂ ಇರಬೇಕು. ವರ್ತಮಾನ ಕಾಲದಲ್ಲಿದ್ದು ಭವಿಷ್ಯ ಕಾಲಕ್ಕೆ ಹೆಜ್ಜೆ ಇಡಬೇಕಾದರೆ ಭೂತಕಾಲದ ಅರಿವಿರಬೇಕು. ಆ ಕಾಲದಲ್ಲಿ ಸಾಮಾನ್ಯ ಜನರಿಗೆ ಶಿಕ್ಷಣವೇ ಇರಲಿಲ್ಲ. 1864 ರಲ್ಲಿ ನಾಲ್ಕು ಪ್ರೌಢಶಾಲೆಗಳು ಸ್ಥಾಪನೆಯಾದವು. ಅದರಲ್ಲಿ ಹಾಸನದ ಪ್ರೌಢಶಾಲೆಯೂ ಒಂದು ಎಂದು ಹೇಳುತ್ತಾ ಲಕ್ಕಪ್ಪಗೌಡರ ಸಾಹಿತ್ಯಾಭಿರುಚಿಯ ಬಗ್ಗೆ ಬೆಳಕು ಚೆಲ್ಲಿದರು. ಡಾ. ರಾಜೇಗೌಡ ಹೊಸಳ್ಳಿ ಅವರನ್ನು ಕುರಿತು ಸಾಹಿತಿ ಜ.ನಾ. ತೇಜಶ್ರೀ, ಡಾ. ರಾಜೇಗೌಡ ಹೊಸಳ್ಳಿ ಅವರು ಕಡದರವಳ್ಳಿ ಗ್ರಾಮಕ್ಕೆ ಬಂದಾಗ ಹೊಲದ ಕೆಲಸಕ್ಕೆ ಬಂದ ಮಹಿಳೆಯನ್ನು ಕರೆದು ಮಾತನಾಡಿಸಿ ಅವರಲ್ಲಿದ್ದ ಹಾಡುಗಾರಿಕೆಯನ್ನು ಗುರುತಿಸಿದ ಪರಿ ನಿಜಕ್ಕೂ ಅವರು ಜನಸಾಮಾನ್ಯರ ನಡುವೆ ಅಷ್ಟು ಬೆರೆಯುತ್ತಿದ್ದರು. ಬದುಕಿಯ ಬಗೆಯ ಮೂಲಕ ಪ್ರಜ್ಞೆ ಬೀರಿದವರು ಎಂದು ತಿಳಿಸಿದರು.
ಕನ್ನಡ ಜಾನಪದ ಪರಿಷತ್ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿ, ಡಾ. ಎಚ್.ಜೆ. ಲಕ್ಕಪ್ಪಗೌಡ ಮತ್ತು ಡಾ. ರಾಜೇಗೌಡ ಹೊಸಳ್ಳಿರವರು ಶಿಷ್ಟ ಸಾಹಿತ್ಯ ಮತ್ತು ಮತ್ತು ಜಾನಪದ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.


ಕಾರ್ಯಕ್ರಮದ ಅಧ್ಯಕ್ಷತೆ ಪ್ರಾಂಶುಪಾಲ ಪ್ರೊ. ಟಿ.ಪಿ. ಪುಟ್ಟರಾಜು ವಹಿಸಿದ್ದರು,ಕಲಾವಿದ ಕಟ್ಟೆಬೆಳಗುಲಿ ಕುಮಾರ್, ಶೈಕ್ಷಣಿಕ ಡೀನ್ ಡಾ. ಎಂ.ಬಿ. ಇರ್ಷಾದ್, ಪರೀಕ್ಷಾ ನಿಯಂತ್ರಕ ಪ್ರೊ. ಕೆ.ಡಿ. ಮುರುಳೀಧರ್, ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ, ಕಜಾಪ ಖಜಾಂಚಿ ಬಿ.ಟಿ. ಮಾನವ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ನಿರ್ದೇಶಕ ವಿಶುಕುಮಾರ್, ವಿಶ್ರಾಂತ ಪ್ರಾಂಶುಪಾಲೆ ನಾಗರತ್ನ, ವಕೀಲ ಆನಂದ್‌ಚಿಕ್ಕಂದೂರು, ಶಹಬ್ಬುದ್ದೀನ್, ಆಕಾಶವಾಣಿಯ ನೂತನ್‌ದೋಶೆಟ್ಟಿ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಹೆಚ್.ಡಿ. ದೇವರಾಜ್, ಪ್ರಾಧ್ಯಾಪಕಿ ಪ್ರಮೀಳ ಇತರರು ಇದ್ದರು.