ಜಿಲ್ಲೆ

ಮನುಷ್ಯ ಖಿನ್ನತೆಗೆ ಒಳಗಾದಾಗ ಕುಗ್ಗಬಾರದು: ಡಾ.ಎಸ್.ವಿ. ಸಂತೋಷ್

ಹಾಸನ : ಮನಸ್ಸು ಮತ್ತು ದೇಹದ ಜತೆ ಒಂದು ಸಂಬಂಧ ಇರುತ್ತದೆ. ನಮ್ಮ ಮಾನಸಿಕ ಭಾವನೆಗಳನ್ನು ಆಪ್ತರ ಜತೆಗೆ ಆದಷ್ಟು ಹಂಚಿಕೊಳ್ಳಬೇಕು. ಆಗ ಮಾತ್ರ ನಮ್ಮ ನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ಖಿನ್ನತೆ ಸುಲಭವಾಗಿ ದೂರವಾಗುತ್ತದೆ. ಮನುಷ್ಯ ಖಿನ್ನತೆಗೆ ಒಳಗಾದಾಗ ಕುಗ್ಗದೆ, ಆ ಕ್ಷಣ ತನ್ನ ಉದ್ವೇಗವನ್ನು ಕಡಿಮೆ ಮಾಡಿಕೊಂಡಲ್ಲಿ ಆಗುವ ಅನಾಹುತವನ್ನು ತಪ್ಪಿಸಬಹುದು ಮತ್ತು ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಹಾಸನದ ವೈದ್ಯಕೀಯ ಮಹಾವಿದ್ಯಾಲಯದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ವಿ. ಸಂತೋಷ್ ತಿಳಿಸಿದರು.

ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ರಾಜೀವ್ ಪಾಲಿಟೆಕ್ನಿಕ್‌ನಲ್ಲಿ ಶನಿವಾರ ಆಯೊಜಿಸಿದ್ದ 14ನೇ ವಾರ್ಷಿಕ ದಿನಾಚರಣೆ ‘ರಾಜೀವ್ ಫೆಸ್ಟ್-2023’ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಚಟಗಳಿಗೆ ಬಲಿಯಾಗದೆ ಆಧುನಿಕ ತಂತ್ರಜ್ಞಾನವನ್ನು ಎಷ್ಟು ಬೇಕೋ ಅಷ್ಟು ಉಪಯೋಗಿಸಿದರೆ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ರಾಜೀವ್ ಪಾಲಿಟೆಕ್ನಿಕ್‌ನ ವಾತಾವರಣ ಹಾಗೂ ಹಸಿರು ಗಿಡಗಳು ವಿದ್ಯಾರ್ಥಿಗಳಿಗೆ ಓದಲು ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಉತ್ತಮವಾಗಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಕಿವಿ ಮಾತು ಹೇಳಿದರು.

ರಾಜೀವ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ರಂಜಿತ್ ರಾಜೀವ್ ಅವರು ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಕ್ಷಣ ಹಾಗೂ ಪಠ್ಯೇತರ ವಿಷಯಗಳಲ್ಲಿ ಹೇಗೆ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯದರ್ಶಿಗಳಾದ ಡಾ.ಬಿ.ಎನ್. ರತ್ನಾ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಮತ್ತು ನಿಮ್ಮ ಅಭಿವೃದ್ಧಿಗೆ ಬೆಂಬಲವಾಗಿ ಸದಾ ನಮ್ಮ ರಾಜೀವ್ ಶಿಕ್ಷಣ ಸಂಸ್ಥೆ ನಿಮ್ಮೊಂದಿಗೆ ಇರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಠ್ಯ, ಕ್ರೀಡೆ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಾಲಿನಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳಾದ ಎ.ವೈ. ನಿಶಾಂತ್ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಹರ್ಷಿತಾ ಇ ಆಂಡ್ ಸಿ ವಿಭಾಗದಲ್ಲಿ ಶೇ 99 ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದ ಇಬ್ಬರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಡಾ.ಎಂ.ಆರ್. ಶಂಕರೇಗೌಡ ಹಾಗೂ ಇ ಆಂಡ್ ಸಿ ವಿಭಾಗದ ಮುಖ್ಯಸ್ಥರಾದ ಜಿ. ಮಂಜುನಾಥ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.