ಬೀದರ್: ಜಗದ್ಗುರು ರೇಣುಕಾಚಾರ್ಯರು ಮನುಕುಲದ ಉನ್ನತಿಗೆ ಶ್ರಮಿಸಿದರು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಾ ಪ್ರಧಾನ ಕಾರ್ಯದರ್ಶಿಯೂ ಆದ ಶಾಸಕ ಈಶ್ವರ ಖಂಡ್ರೆ ನುಡಿದರು.
ಜಿಲ್ಲಾ ಆಡಳಿತ ವತಿಯಿಂದ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರೇಣುಕಾಚಾರ್ಯರು ಕೋಲನಪಾಕ್ ಉದ್ಘವಲಿಂಗದಲ್ಲಿ ಅವತರಿಸಿದ್ದರು. ಲಿಂಗ ದೀಕ್ಷೆಯೊಂದಿಗೆ ಜನರಿಗೆ ಸಂಸ್ಕಾರ ಕೊಟ್ಟಿದ್ದರು ಎಂದು ಹೇಳಿದರು.
ವೀರಶೈವ ಲಿಂಗಾಯತ ಸಮುದಾಯದ ಒಳ ಪಂಗಡಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎನ್ನುವುದು ರೇಣುಕಾಚಾರ್ಯರ ಸಂದೇಶವಾಗಿತ್ತು. ಬಹುದೊಡ್ಡ ಸಮುದಾಯ ಆಗಿರುವ ವೀರಶೈವ ಲಿಂಗಾಯತವು ಇತರ ಸಮುದಾಯಗಳಿಗೆ ಮಾರ್ಗದರ್ಶಿಯಾಗಿ ಹೊರ ಹೊಮ್ಮುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ರಹೀಂಖಾನ್ ಮಾತನಾಡಿ, ದೇವರು ಎಲ್ಲೆಡೆಯೂ ಇದ್ದಾನೆ. ಅವನ ದೇವರ ದೃಷ್ಟಿಯಲ್ಲಿ ಮಾನವರೆಲ್ಲರೂ ಒಂದೇ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ತಡೋಳಾ-ಮೆಹಕರದ ರಾಜೇಶ್ವರ ಶಿವಾಚಾರ್ಯ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯವು ಸರ್ವ ಧರ್ಮೀಯರನ್ನು ಗೌರವಿಸುವ ಶ್ರೇಷ್ಠ ಸಂಸ್ಕøತಿಯನ್ನು ಹೊಂದಿದೆ ಎಂದು ತಿಳಿಸಿದರು.
ಬೇಮಳಖೇಡದ ಡಾ. ರಾಜಶೇಖರ ಶಿವಾಚಾರ್ಯ ಮಾತನಾಡಿ, ವೀರಶೈವ ಲಿಂಗಾಯತ ಧರ್ಮ ಎಂಟನೇ ಶತಮಾನಕ್ಕಿಂತ ಹಳೆಯದ್ದು ಎಂದು ಖ್ಯಾತ ಸಂಶೋಧಕ, ಸಾಹಿತಿ ಮ್ಯಾಕ್ಸ್ ಮುಲ್ಲರ್ ಉಲ್ಲೇಖಿಸಿದ್ದಾರೆ. ಚಿದಾನಂದ ಮೂರ್ತಿ ಅವರು ಕೂಡ ಅನೇಕ ಬಾರಿ ಇದನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಿದರು.
ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಿತಿಯ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಮಾತನಾಡಿ, ಬೀದರ್ ಜಿಲ್ಲೆ ಶಿವಶರಣರು, ಸಂತರು, ದಾರ್ಶನಿಕರು ನಡೆದಾಡಿದ ನೆಲವಾಗಿದೆ. ಈ ಪುಣ್ಯ ಭೂಮಿಯಲ್ಲಿ ಸರ್ವರೂ ಸೇರಿ ವೈಭವದಿಂದ ರೇಣುಕಾಚಾರ್ಯರ ಜಯಂತಿ ಆಚರಿಸಿರುವುದು ಧರ್ಮ ಸಮನ್ವಯತೆಯೇ ಹಿಡಿದ ಕೈಗನ್ನಡಿಯಾಗಿದೆ ಎಂದು ಬಣ್ಣಿಸಿದರು.
ಹಿರಿಯ ಮುಖಂಡ ಶಿವಶರಣಪ್ಪ ವಾಲಿ ಮಾತನಾಡಿ, ವೀರಶೈವ ಲಿಂಗಾಯತ ಧರ್ಮ ಪುರಾತನ ಧರ್ಮವಾಗಿದೆ. ಜಗತ್ತಿಗೆ ಈ ಧರ್ಮದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಮಾತನಾಡಿ, ಸರ್ಕಾರದ ವತಿಯಿಂದಲೇ ಜಯಂತಿ ಆಚರಿಸುವ ಮೂಲಕ ರಾಜ್ಯ ಸರ್ಕಾರ ಬಹುಸಂಖ್ಯಾತ ವೀರಶೈವ ಲಿಂಗಾಯತರ ಬೇಡಿಕೆಗೆ ಸ್ಪಂದಿಸಿದೆ. ಸರ್ವ ಸಮುದಾಯದವರು ಒಗ್ಗೂಡಿ ಆಚರಿಸಿರುವ ಜಯಂತಿಯು ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿದೆ. ಜಿಲ್ಲೆಯ ಜನ ಯುಗಮಾನೋತ್ಸವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಿರುವುದು ಸಂತಸ ಉಂಟು ಮಾಡಿದೆ ಎಂದು ಹೇಳಿದರು.
ಜಯಂತಿ ಸಮಿತಿ ಕಾರ್ಯಾಧ್ಯಕ್ಷ ಸಿದ್ರಾಮಯ್ಯ ಸ್ವಾಮಿ ಮಾತನಾಡಿದರು. ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಮುಖಂಡರಾದ ವೈಜಿನಾಥ ಕಮಠಾಣೆ, ಶಕುಂತಲಾ ಬೆಲ್ದಾಳೆ, ಈಶ್ವರಸಿಂಗ್ ಠಾಕೂರ್, ರಾಮಕೃಷ್ಣ ಸಾಳೆ, ಬಸವರಾಜ ಬಾಬಶೆಟ್ಟಿ, ಡಾ. ರಜನೀಶ್ ವಾಲಿ, ಕುಶಾಲರಾವ್ ಯಾಬಾ, ಮಲ್ಲೇಶ ಗಣಾಪುರ, ಸಿದ್ದು ಫುಲಾರಿ, ರಾಜಕುಮಾರ ಹೆಬ್ಬಾಳೆ, ಶಶಿಕಾಂತ ಪಾಟೀಲ ಚೌಳಿ, ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ವರದಯ್ಯ ಸ್ವಾಮಿ, ಓಂಪ್ರಕಾಶ ರೊಟ್ಟೆ, ನಾಗರಾಜ ಮಠ, ಶಿವಶಂಕರ ಬೆಳಮಗಿ, ಮಹಾಲಿಂಗ ಸ್ವಾಮಿ ಚಟ್ನಳ್ಳಿ, ಪ್ರವೀಣ ಸ್ವಾಮಿ, ಮಂಜುನಾಥ ಸ್ವಾಮಿ, ರೇವಣಸಿದ್ದಯ್ಯ ಸ್ವಾಮಿ ಇದ್ದರು. ಚನ್ನಬಸವ ಹೇಡೆ ನಿರೂಪಿಸಿದರು.
ಜಯಂತಿ ಅಂಗವಾಗಿ ನಗರದಲ್ಲಿ ಮಹಾ ಪುರುಷರ ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಎಲ್ಲೆಡೆ ಜಯಂತಿಗೆ ಶುಭಾಶಯ ಕೋರುವ ಕಟೌಟ್, ಬ್ಯಾನರ್‍ಗಳನ್ನು ಅಳವಡಿಸಲಾಗಿತ್ತು.