ಸರಗೂರು : ದಾಸ ಸಾಹಿತ್ಯದ ಮೂಲಕ ಕನಕದಾಸರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ರಂಗಕ್ಕೆ ನೀಡಿದ ಕೊಡುಗೆ ಅಪಾರ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಶ್ಲಾಘಿಸಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ? ಎಂದು ಹಾಡಿ ಜಾತ್ಯತೀತ ದಾರ್ಶನಿಕರಾಗಿ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರನ್ನು ಕೇವಲ ಒಂದು ಜಾತಿಗೆ ಸೀಮಿತವಾಗಿ ಮಾಡದೇ ಮನುಕುಲದ ಉದ್ಧಾರಕ ಎಂದು ಭಾವಿಸಬೇಕು ಎಂದರು.
ಪಪಂ ಸದಸ್ಯ ಹಾಗೂ ನಾಯಕ ಸಮಾಜದ ತಾಲೂಕು ಉಪಾಧ್ಯಕ್ಷ ಶ್ರೀನಿವಾಸ ಮಾತನಾಡಿ, ದಾಸಶ್ರೇಷ್ಠ ಕನಕದಾಸ ಸಮಾಜದ ಮೂಢ ನಂಬಿಕೆ, ಜಾತಿ ಪದ್ಧತಿ ಸೇರಿದಂತೆ ಅನಿಷ್ಠ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ, ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಮಹಾನ್ ದಾರ್ಶನಿಕರು ಎಂದರು.
ಕನಕದಾಸರು ಒಂದು ವರ್ಗದ ಸೀಮಿತವಾಗಿಲ್ಲ. ಅವರು ಕಾವ್ಯ ಹಾಗೂ ಕೀರ್ತನೆಗಳ ಮೂಲಕ ಸಮಾಜದಲ್ಲಿ ಬೇರೂರಿದ್ದ ಕಂದಾಚಾರಗಳನ್ನು ಹೋಗಲಾಡಿಸಲು ಶ್ರಮಿಸಿ, ಸಾಹಿತ್ಯಕ್ಕೆ ತನ್ನದೆ ಆದ ಕೊಡುಗೆ ನೀಡಿ, ಎಲ್ಲರನ್ನು ಸಮಾನ ತೆ ದೃಷ್ಟಿಕೋನದಿಂದ ನೋಡುವಂತೆ ತಿಳಿಸಿ ವಿಶ್ವಮಾನವರಾದರು ಎಂದರು.
ಪಪಂ ಸದಸ್ಯರು ಚಲುವ ಕೃಷ್ಣ, ನೂರಳಾಸ್ವಾಮಿ, ಚೈತ್ರಾ ಸ್ವಾಮಿ, ಸಣ್ಣ ತಾಯಮ್ಮ, ಮುಖಂಡರು ರಮೇಶ್, ಸ್ವಾಮಿ, ಮುಖ್ಯಾಧಿಕಾರಿ ಎಸ್.ಕೆ. ಸಂತೋಷ ಕುಮಾರ್, ಸಿಬ್ಬಂದಿ ಪಳಿನಿಸ್ವಾಮಿ, ರಾಮು,ಅನಿತಾಕುಮಾರಿ, ಅರುಣ್ ಆರಾಧ್ಯ, ದಿನೇಶ್, ಪೌರಕಾರ್ಮಿಕರು ಹಾಗೂ ಮುಖಂಡರು ಹಾಜರಿದ್ದರು.