ಹುಮನಾಬಾದ್: ದೇಶಕ್ಕೆ ಮತ್ತು ಸಮಾಜಕ್ಕೆ ಅಪಾರ ಕೊಡುಗೆ ನೀಡಿರುವ ಶ್ರೀ ದಯಾನಂದ ಸರಸ್ವತಿಗಳ ದ್ವಿಶತಮಾನೋತ್ಸವ ನಿಮಿತ್ತ ಪಟ್ಟಣ ಹೊರವಲಯದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಆರ್ಯ ಸಮಾಜ ಡಿ.೨೨ರಂದು ೫೦ ಕುಂಡಗಳೊಂದಿಗೆ ೨೦೦ ಕುಟುಂಬಸ್ಥರಿಂದ ಮಾನವ ಕಲ್ಯಾಣಕ್ಕಾಗಿ ಯಜ್ಞ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಸಂಯೋಜಕ ಹಾಗೂ ಕರ್ನಾಟಕ ಆರ್ಯ ಪ್ರತಿನಿಧಿ ಸಭಾ ಗೌರವಾಧ್ಯಕ್ಷ ಸುಭಾಷ ಅಷ್ಟಿಕರ್ ತಿಳಿಸಿದರು.
ಮಾಣಿಕಪ್ರಭು ಸಂಸ್ಥಾನದ ಶ್ರೀ ಡಾ.ಜ್ಞಾನರಾಜ ಪ್ರಭು, ಹಿರೇಮಠ ಸಂಸ್ಥಾನದ ಶ್ರೀ ರೇಣುಕ ವೀರ ಗಂಗಾಧರ ಶಿವಾಚಾರ್ಯ ಸಾನ್ನಿಧ್ಯದಲ್ಲಿ ರಾಜರಾಜೇಶ್ವರಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷೆ ಪ್ರೇಮಾ ರಾಜಶೇಖರ ಪಾಟೀಲ್, ಯೋಗಿತಾ ಚಂದ್ರಶೇಖರ ಪಾಟೀಲ್, ವಿದ್ಯಾಶ್ರೀ ಭೀಮರಾವ ಪಾಟೀಲ್, ಮಹಾಲಕ್ಷ್ಮೀ ಅಭಿಷೇಕ ಪಾಟೀಲ್ ಅವರ ಪರಿವಾರದ ಸಹಯೋಗದಡಿ ೨೨ರ ಬೆಳಗ್ಗೆ ೯ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್‌ಜಿ, ನವದೆಹಲಿ ಆರ್ಯ ಪ್ರತಿನಿಧಿ ಸಭಾ ಮಂತ್ರಿ ವಿನಯ ಆರ್ಯ, ಉತ್ತರಪ್ರದೇಶ ಸಾಹರನಪುರದ ಸುಖಪಾಲ್ ಭಾಗವಹಿಸುವರು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮ ಸಮಿತಿ ಅಧ್ಯಕ್ಷ ದಯಾನಂದ ಅಷ್ಟಿಕರ್ ಮಾತನಾಡಿ. ಹುಮನಾಬಾದ್ ಸೇರಿ ಜಿಲ್ಲೆಯ ಪ್ರತಿಯೊಬ್ಬರೂ ಕುಟುಂಬಸಮೇತ ಭಾಗವಹಿಸಿ ಯಜ್ಞ ಕಾರ್ಯ ಐತಿಹಾಸಿಕವಾಗಿಸಬೇಕು ಎಂದು ಕೋರಿದರು.
ಆರ್ಯ ಸಮಾಜ ಪ್ರಧಾನ ನಾರಾಯಣ ಚಿದ್ರಿ, ಉಪಪ್ರಧಾನ ಜಗನ್ನಾಥ ಚಿದ್ರಿ, ದೇವಿದಾಸ ಆರ್ಯ, ಕಾರ್ಯದರ್ಶಿ ಗೋವಿಂದಸಿಂಗ್ ತಿವಾರಿ, ಕೋಶಾಧ್ಯಕ್ಷ ಭುಜಂಗರಾವ ಆರ್ಯ, ದಶರಥ ಆರ್ಯ, ನೀಲೇಶ ಲಾಂಡೆ, ಸಂಜಯ ದಂತಕಾಳೆ, ವೆಂಕಟೇಶ ಜಾಧವ್ ಇತರರಿದ್ದರು.
೨೦೦ಕ್ಕೂ ಅಧಿಕ ಕುಟುಂಬಗಳಿಂದ ನೋಂದಣಿ: ದ್ವಿಶತಮಾನೋತ್ಸವ ಪ್ರಯುಕ್ತ ೨೦೦ ಕುಟುಂಬಗಳಿಂದ ಯಜ್ಞ ನಡೆಸಲು ಸಂಕಲ್ಪ ಮಾಡಿದ್ದರೂ ಅದಕ್ಕಿಂತ ಹೆಚ್ಚಿನ ಪರಿವಾರಗಳು ಹೆಸರು ನೋಂದಾಯಿಸಿವೆ. ಈ ಕಾರ್ಯಕ್ರಮ ಆಯೋಜನೆ ಸ್ಥಳದ ಚರ್ಚೆ ನಡೆಯುತ್ತಿದ್ದಾಗ ರಾಜರಾಜೇಶ್ವರಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷೆ ಪ್ರೇಮಾ ಪಾಟೀಲ್ ಅವರು ನಮ್ಮ ದೇಗುಲದಲ್ಲೇ ಮಾಡಿ ಎಂದು ಹೇಳಿದರು. ಇದಕ್ಕೆ ಸಮ್ಮತಿ ಸೂಚಿಸಿದ ಪತಿ, ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಇತರರು ಮನುಕುಲ ಕಲ್ಯಾಣದ ಈ ಯಜ್ಞ ಕಾರ್ಯಕ್ರಮಕ್ಕಾಗಿ ಟೆಂಟ್, ಆಸನ, ಪ್ರಸಾದ ಸೇರಿ ಅಗತ್ಯ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ.
ಯಜ್ಞಕ್ಕೆ ಬೇಕಾಗುವ ಸಾಮಗ್ರಿ ಆರ್ಯ ಸಮಾಜ ವ್ಯವಸ್ಥೆ ಮಾಡಿದೆ. ಯಜ್ಞದಲ್ಲಿ ಪಾಲ್ಗೊಳ್ಳುವ ಕುಟುಂಬಕ್ಕೆ ಯಾವುದೇ ಶುಲ್ಕವಿಲ್ಲ. ಗಂಡಸರು ಬಿಳಿ ಬಟ್ಟೆ ಹಾಗೂ ಮಹಿಳೆಯರು ಸೇರಿ ಧರಿಸುವುದು ಉತ್ತಮ. ಪಾಲ್ಗೊಳ್ಳಲು ಬಯಸುವವರು ಹೆಸರು ನೋಂದಾಯಿಸಿದರೆ ವ್ಯವಸ್ಥೆ ಕಲ್ಪಿಸಲಾಗುವುದು.
| ನಾರಾಯಣರಾವ ಚಿದ್ರಿ ಪ್ರಧಾನ ಆರ್ಯ ಸಮಾಜ ಹುಮನಾಬಾದ್