ಸಿದ್ದಾಪುರ: ಮನುಷ್ಯನ ಮನಸ್ಸು ಶುದ್ಧೀಕರಣಗೊಂಡಲ್ಲಿ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಕಂಡಕರೆ ಮಹಲ್ ಖತೀಬರಾದ ಮುಸ್ತಫಾ ಸಖಾಫಿ ಅಭಿಪ್ರಾಯಪಟ್ಟರು.
ಸೋಮವಾರ ಮಸ್ಜಿದ್‌ತಖ್ವಾದಲ್ಲಿ ಹಮ್ಮಿಕೊಂಡಿದ್ದ ಪ್ರಾರ್ಥನೆ ವೇಳೆ ಮಾತನಾಡಿದ ಅವರು, ಮನಸ್ಸಿನಲ್ಲಿ ದ್ವೇಷ, ಅಸೂಯೆ ಇರಿಸಿಕೊಂಡು ಜೀವನ ನಡೆಸಬಾರದು. ಮನುಜರ ಮನಸ್ಸು ಸದಾ ಕಾಲ ಶುದ್ಧೀಕರಣದಿಂದರಬೇಕು. ಅದಲ್ಲದೆ ಮನಸ್ಸಿನಲ್ಲೊಂದು, ಹೊರಗಡೆ ಒಂದು ವ್ಯಕ್ತಿತ್ವ ಇರಬಾರದು. ನಮ್ಮ, ನಡೆ, ನುಡಿ ನೇರವಾಗಿರಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳಿಗೆ ಯುವ ಸಮುದಾಯ ಬಲಿಯಾಗುತ್ತಿದ್ದಾರೆ. ಡ್ರಗ್ಸ್, ಗಾಂಜಾ, ಇನ್ನಿತರ ಮಾದಕ ವ್ಯಸನಗಳಿಂದ ಯುವಕರು ದೂರವಿದ್ದು, ಸಮಾಜದ ಯಶಸ್ವಿಗೆ ದುಡಿಯಬೇಕು ಎಂದು ಮುಸ್ತಫಾ ಸಖಾಫಿ ಕರೆ ನೀಡಿದರು.
ಈದ್ ಉಲ್ ಫಿತರ್ ಪ್ರಾರ್ಥನೆ ಬಳಿಕ ಕಂಡಕರೆ ಖಬರ್‌ಸ್ತಾನದಲ್ಲಿ ಮರಣ ಹೊಂದಿದವರಿಗೆ ವಿಶೇಷ ಪಾರ್ಥನೆ ನೆರವೇರಿಸಲಾಯಿತು. ನಂತರ ಎಲ್ಲರೂ ಪರಸ್ಪರ ಆಲಂಗಿಸಿಕೊಳ್ಳುವ ಮೂಲಕ ಹಬ್ಬಕ್ಕೆ ಶುಭಕೋರಿದರು.
ಮಹಮ್ಮದ್ ಮುಸ್ಲಿಯಾರ್, ಕಂಡಕರೆ ಮಹಲ್ ಅಧ್ಯಕ್ಷ ಅಲಿ ಮುಸ್ಲಿಯಾರ್ ಹಾಜಿ, ಉಪಾಧ್ಯಕ್ಷ ಕೆ.ಎ ಹುಸೈನ್,ಪ್ರ.ಕಾರ್ಯದರ್ಶಿ ಸರ್ಫುದ್ದೀನ್, ಸಹ ಕಾರ್ಯದರ್ಶಿ ಪಿ.ಎಂ ಗಫೂರ್ ಮತ್ತಿತರರು ಇದ್ದರು.