ಶ್ರಾವಣ ಮಾಸದ ನಿಮಿತ್ತ ಬಸವಕಲ್ಯಾಣದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಪೌರಾಯುಕ್ತ ರಾಜು.ಡಿ ಬಣಕಾರ ಉದ್ಘಾಟಿಸಿದರು. ಶ್ರೀ ಪ್ರಣವಾನಂದ ಸ್ವಾಮೀಜಿ, ಶ್ರೀ ಅದ್ವೈತಾನಂದ ಸ್ವಾಮೀಜಿ, ಬಸವರಾಜ ಕೋರಕೆ, ವೀರಣ್ಣ ಹಲಶೆಟ್ಟಿ ಇತರರಿದ್ದರು. 
ಜಿಲ್ಲೆ

ಮನಸ್ಸು ಶುದ್ಧಿಗೆ ಶ್ರಾವಣ ಮಾಸ ಪೂರಕ

ರಾಜು ಯಮಕನಮರಡಿ

ಬಸವಕಲ್ಯಾಣ: ಮನಸ್ಸು ಶುದ್ಧಿ ಮಾಡಿಕೊಳ್ಳುವುದು, ದುಃಖ, ದುಗುಡ, ದುಮ್ಮಾನಗಳನ್ನು ದೂರ ಮಾಡುವುದು ಮತ್ತು ಜೀವನದ ಅರ್ಥ ತಿಳಿದುಕೊಳ್ಳುವ ಮಾಸವೇ ಶ್ರಾವಣ ಮಾಸ ಎಂದು ಪೌರಾಯುಕ್ತ ರಾಜು.ಡಿ ಬಣಕಾರ ಹೇಳಿದರು.

ಶ್ರಾವಣ ಮಾಸದ ನಿಮಿತ್ತ ನಗರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವರ್ಷದ ೧೧ ತಿಂಗಳು ನೋವು-ನಲಿವು, ಜೀವನದ ಜಂಜಾಟ, ಕೆಲಸಗಳಲ್ಲಿ ಮನಸ್ಸಿಗೆ ಭಾರವಾಗಿರುತ್ತದೆ. ಎಲ್ಲವನ್ನು ಅನುಭವಿಸಿದ ಮನಸ್ಸು ಹಗುರವಾಗಲು ಆಧ್ಯಾತ್ಮಿಕ ಚಿಂತನ ಮಾಡುವ ಮೂಲಕ ಈ ಶ್ರಾವಣ ಮಾಸದಲ್ಲಿ ಒಳ್ಳೆಯದನ್ನು ಆಲಿಸಿ ಒಳ್ಳೆಯ ಜ್ಞಾನ ಸಂಪಾದಿಸಿ ಒಳ್ಳೆಯ ಮನಸ್ಸು ನಿರ್ಮಾಣ ಮಾಡಿಕೊಳ್ಳುವುದಾಗಿದೆ ಎಂದರು.

ನೇತೃತ್ವ ವಹಿಸಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಅದ್ವೈತಾನಂದ ಸ್ವಾಮೀಜಿ ಮಾತನಾಡಿ, ಮನುಷ್ಯನು ತನ್ನಲ್ಲಿರುವ ವಿಶೇಷ ಜ್ಞಾನದ ಮೂಲಕ ತನ್ನ ಒಳಗಿರುವ ಚೇತನ, ಆತ್ಮ ವಸ್ತುವನ್ನು ಅರಿಯಬೇಕಾಗಿದೆ. ಆತ್ಮವನ್ನು ಅರಿಯಬೇಕಾದರೆ ನಮ್ಮಲ್ಲಿರುವ ಅವಗುಣಗಳನ್ನು ತೆಗೆದು ಹಾಕಬೇಕಾಗುತ್ತದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಮುಚಳಂಬದ ನಾಗಭೂಷಣ ಶಿವಯೋಗಿ ಸಂಸ್ಥಾನ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಾರ್ಥಕತೆ ಕಾಣಲು ಅಧ್ಯಾತ್ಮ ಅವಶ್ಯಕ. ಒಳ್ಳೆಯ ವಿಚಾರಗಳನ್ನು ಶ್ರವಣ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವುದೇ ಕಾರ್ಯಕ್ರಮದ ಆಶಯವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಭಾಲ್ಕಿಯ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಆಶೀರ್ವಚನ ನೀಡಿದರು.

ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ನಿರ್ದೇಶಕ ಮಲ್ಲಯ್ಯ ಹಿರೇಮಠ, ಸುಭಾಷ ಹೂಳಕುಂದೆ, ಕಾಶಪ್ಪ ಸಕ್ಕರಭಾವಿ, ಶ್ರೀಕಾಂತ ಬಡದಾಳೆ, ಜಗನ್ನಾಥ ಖೂಬಾ, ಅನಿಲಕುಮಾರ ರಗಟೆ, ಅಶೋಕ ನಾಗರಾಳೆ, ವಿಶ್ವಸ್ಥ ಸಮಿತಿಯ ಉಪಾಧ್ಯಕ್ಷ ಡಾ.ಜಿ.ಎಸ್ ಭುರಾಳೆ ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟೆ ಇದ್ದರು. ಶ್ರೀ ಬಸವೇಶ್ವರ ಕನ್ನಡ ಪ್ರೌಢ ಶಾಲೆಯ ಮಕ್ಕಳಿಂದ ವಚನ ನೃತ್ಯ ಮಾಡಿಸಲಾಯಿತು. ನಿರ್ದೇಶಕ ವೀರಣ್ಣ ಹಲಶಟ್ಟೆ ಸ್ವಾಗತಿಸಿದರು. ಜ್ಯೋತಿ ತುಗಾವೆ ನಿರೂಪಣೆ ಮಾಡಿ ವಂದಿಸಿದರು.

ಮನಸ್ಸಿನ ಶಾಂತಿ, ಸಮಾಧಾನ ಆನಂದಕ್ಕೆ ಅಧ್ಯಾತ್ಮ ಅವಶ್ಯಕ. ಬಸವಣ್ಣನವರು ಬಹಿರಂಗ ಶುದ್ಧಿ ಹಾಗೂ ಅಂತರಂಗ ಶುದ್ಧಿಗೆ ಮಹತ್ವ ನೀಡಿದರು. ಅವರು ನೀಡಿದ ಆದರ್ಶ ಬದುಕಿನ ಸೂತ್ರಗಳನ್ನು ಅರಿತುಕೊಳ್ಳಬೇಕಿದೆ. ಜನರ ಮನಸ್ಸು ಶುದ್ಧಿಗೊಳ್ಳಬೇಕು ಎನ್ನುವುದೇ ಪ್ರವಚನದ ಆಶಯವಾಗಿದೆ.

| ಶ್ರೀ ಗುರುಬಸವ ಪಟ್ಟದ್ದೇವರು

ಹಿರೇಮಠ ಸಂಮಸ್ಥಾನ ಭಾಲ್ಕಿ