ಕೂಡ್ಲಿಗಿ: ಬದುಕು ಶ್ರೇಷ್ಠವಾಗಬೇಕಾದರೆ ದುಡಿಮೆಯನ್ನು ಪೂಜಿಸಬೇಕು ಎಂದು ಗ್ರೇಡ್-2 ತಹಸೀಲ್ದಾರ್ ವಿ.ಕೆ.ನೇತ್ರಾವತಿ ಹೇಳಿದರು.
ತಾಲೂಕು ಕಚೇರಿಯಲ್ಲಿ ಮಂಗಳವಾರ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ಧರಾಮೇಶ್ವರ ಅವರು ಸಮಾಜದ ಒಳಿತಿಗಾಗಿ ಬದುಕಿದ ನಿಜವಾದ ಕಾಯಕ ಯೋಗಿ. ಅವರು ಡಂಭಾಚಾರದ ಪವಾಡಗಳನ್ನು ಸೃಷ್ಟಿಸಲಿಲ್ಲ. ಬದಲಾಗಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸುವ ಪವಾಡ ಮಾಡಿದರು. ಮನುಷ್ಯ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲ ಎಂಬುದನ್ನು ಅವರು 12ನೇ ಶತಮಾನದಲ್ಲಿಯೇ ತೋರಿಸಿದ್ದಾರೆ ಎಂದರು.
ಕಜಾಪ ತಾಲೂಕಾಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ, ವಚನಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ಸರಿಪಡಿಸಿದ ಸಿದ್ಧರಾಮೇಶ್ವರ ಅನುಭವ ಮಂಟಪದ ಧ್ರುವತಾರೆ. ವಚನಗಳ ಮೂಲಕ ಜಗತ್ತಿಗೆ ಅಪಾರ ಕೊಡುಗೆ ನೀಡಿದ್ದಾರೆ. 12ನೇ ಶತಮಾನದಲ್ಲಿ ಮನುಕುಲದಲ್ಲಿ, ಅದರಲ್ಲಿಯೂ ಭರತ ಖಂಡದಲ್ಲಿ ಸಾಕಷ್ಟು ಬದಲಾವಣೆಯಾಯಿತು ಎಂದರು.
ಬಿಇಒ ಪದ್ಮನಾಭ ಕರಣಂ, ತಾಲೂಕು ಶಿಕ್ಷಣ ಸಮನ್ವಯಾಧಿಕಾರಿ ಎಸ್.ಎಸ್.ಜಗದೀಶ್, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಮಾರೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ, ವಕೀಲ ಸಾಣೇಹಳ್ಳಿ ಹನುಮಂತಪ್ಪ, ಸಿ.ಎಸ್.ಪುರ ವೆಂಕಟೇಶ, ಯಂಬಳಿ ಮಾರಪ್ಪ, ಯಂಬಳಿ ರಮೇಶ, ಡಿ.ಕೊಟ್ರೇಶ್, ಕೊಲ್ಲೇಶ್, ಹುರಳಿಹಾಳು ಬಜ್ಜಪ್ಪ, ವೆಂಕಟೇಶ ಯಂಬಳಿ, ಕಂಪ್ಲಿ ಬಸವರಾಜ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.