ಮೈಸೂರು: ಸಹೋದ್ಯೋಗಿಗಳೊಂದಿಗೆ ಸಮಯ ಕಳೆಯುವುದು, ಆತ್ಮೀಯವಾಗಿರುವುದು ಬಹಳ ಮುಖ್ಯವಾಗುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ವೃತ್ತಿಜೀವನದ ಜತೆಗೆ ವೈಯಕ್ತಿಕ ಸ್ನೇಹವೂ ವೃದ್ಧಿಯಾಗುತ್ತದೆ ಎಂದು ಮೈಸೂರು ಎಕ್ಸ್‌ಪ್ರೆಸ್ ಖ್ಯಾತಿಯ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಹೇಳಿದರು.
ಕರ್ನಾಟಕ ಯೂರಾಲಜಿ ಅಸೋಸಿಯೇಶನ್‌ನಿಂದ ನಗರದ ರೈಲ್ವೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಟಿ-10 ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕ್ರಿಕೆಟ್ ಎಲ್ಲರನ್ನೂ ಒಟ್ಟುಮಾಡುವ ಆಟ. ವಿಶೇಷವಾಗಿ ವೈದ್ಯರು ಸದಾ ಒತ್ತಡದಲ್ಲಿ ಕಾಲಕಳೆಯುತ್ತಿರುತ್ತಾರೆ. ಆದ್ದರಿಂದ ಕ್ರೀಡೆಯಲ್ಲಿ ತೊಡಗಿಸಿಕೊಂಡು ಮನಸ್ಸು ಹಾಗೂ ದೇಹವನ್ನು ಹಗುರಾಗಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಯೂರಾಲಜಿಸ್ಟ್‌ಗಳು ಮಾತ್ರವಲ್ಲದೆ ಇನ್ನಿತರ ತಜ್ಞರು ಸಹ ಈ ರೀತಿಯ ಪಂದ್ಯಾವಳಿಗಳನ್ನು ಆಯೋಜನೆ ಮಾಡಬೇಕು ಎಂದು ತಿಳಿಸಿದರು.
ವಿಜೇತ ತಂಡಕ್ಕೆ ಜಾವಗಲ್ ಶ್ರೀನಾಥ್, ಆಯೋಜಕರಾದ ಡಾ.ಕುಮಾರ್ ಪ್ರಭು, ಪ್ರಶಾಂತ್ ಮಸ್ತಿಹೊಳಿ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ನರೇಂದ್ರ ಜೆ.ಬಿ, ಡಾ.ಸಚಿನ್ ಧರ್ವಾಡ್ಕರ್, ಕೌನ್ಸಿಲ್ ಸದಸ್ಯರು, ಹಿರಿಯ ಯೂರಾಲಜಿಸ್ಟ್ ವೈದ್ಯರು ಭಾಗವಹಿಸಿದ್ದರು.
ಪ್ರೀಮಿಯರ್ ಲೀಗ್ ಮೊದಲನೇ ಆವೃತ್ತಿಯಲ್ಲಿ ವೆಸ್ಟರ್ನ್ ವಾರಿಯರ್ಸ್ ತಂಡ 15 ರನ್‌ಗಳ ಜಯ ದಾಖಲಿಸಿತು. ವಾರಿಯರ್ಸ್ ತಂಡವು 10 ಓವರ್‌ಗಳ ಈ ಪಂದ್ಯದಲ್ಲಿ 6 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಉತ್ತರ ಕರ್ನಾಟಕ ತಂಡ 84 ರನ್ ಗಳಿಸಿತು. ಈ. ನಂದ ಕಿಶೋರ್ ಭರ್ಜರಿ 50 ರನ್ ಗಳಿಸಿ ತಂಡಕ್ಕೆ ಆಸರೆ ಆದರು. ಅಂಕಿತ ರಾಯ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ಕಾರ್ತಿಕ್ ಸರಣಿ ಪುರುಷೋತ್ತಮ ಪ್ರಶಸ್ತಿ ಪಡೆದರು.