ಮದ್ದೂರು: ಯೋಗವು ಮನಸ್ಸು, ದೇಹ ಮತ್ತು ಭೂಮಿಯನ್ನು ಸಂಪರ್ಕಿಸುತ್ತದೆ. ಈ ವರ್ಷದ ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಥೀಮ್ ವೈಯಕ್ತಿಕ ಯೋಗಕ್ಷೇಮ ಮತ್ತು ಜಾಗತಿಕ ಸುಸ್ಥಿರತೆಯಲ್ಲಿ ಅದರ ಪಾತ್ರವನ್ನು ಎತ್ತಿ ತೋರಿಸುತ್ತದೆ ಎಂದು ಗ್ರೀನ್‌ವುಡ್ ವಿದ್ಯಾಸಂಸ್ಥೆಯ ಅಧ್ಯಕ್ಷ ಅಕ್ಷರಂ ವೆಂಕಟೇಶ್ ತಿಳಿಸಿದರು.
ತಾಲೂಕಿನ ಕೊಪ್ಪ ಹೋಬಳಿಯ ಟಿ.ಬಳ್ಳೆಕರೆ ಗ್ರಾಮದ ಗ್ರೀನ್‌ವುಡ್ ವಿದ್ಯಾಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ಸಾಮೂಹಿಕ ಕಾರ್ಯಕ್ರಮಗಳು, ಪರಿಸರ ಅಭಿಯಾನಗಳು ಮತ್ತು ಅಂತರ್ಗತ ಅಧಿವೇಶನಗಳು ಆಚರಣೆಗಳನ್ನು ಗುರುತಿಸುತ್ತವೆ. ಸಮತೋಲಿತ, ಪರಿಸರ ಪ್ರಜ್ಞೆಯ ಜೀವನಕ್ಕಾಗಿ ಜನರು ಯೋಗವನ್ನು ದೈನಂದಿನ ಅಭ್ಯಾಸವಾಗಿ ಅಳವಡಿಸಿಕೊಳ್ಳುವುದರ ಜತೆಗೆ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ಯೋಗದಿಂದ ಉಂಟಾಗುವ ಉಪಯೋಗಗಳ ಬಗ್ಗೆ ಚಿಕ್ಕ ವಯಸ್ಸಿನಿಂದಲ್ಲೇ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರೆ ಅವರು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯವಂತ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ಹೊಂದಿದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಆದ್ದರಿಂದ ಪ್ರತಿ ವರ್ಷ ನಮ್ಮ ವಿದ್ಯಾಸಂಸ್ಥೆಯಲ್ಲಿ ಯೋಗ ದಿನ ಆಚರಿಸುವ ಜತೆಗೆ ಪ್ರತಿನಿತ್ಯ ಸೂರ್ಯ ನಮಸ್ಕಾರ ಮಾಡಿಸುವ ಮೂಲಕ ಯೋಗದ ಮಹತ್ವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಸೂರ್ಯ ನಮಸ್ಕಾರ, ಅರ್ಧಚಕ್ರಸನ, ವಜ್ರಾಸನ, ಚಕ್ರಾಸನ, ಧನುರಾಸನ ಸೇರಿದಂತೆ ವಿವಿಧ ಆಸನಗಳನ್ನು ಮಾಡುವ ಮೂಲಕ ಗಮನ ಸೆಳೆದರು. ಯೋಗ ಶೀಕ್ಷಕ ಮಧುಕರ್, ಬ್ರಾಹ್ಮಿ ಯೋಗ ಕೇಂದ್ರದ ಸಂಸ್ಥಾಪಕ ಶ್ರೀನಿವಾಸ್‌ಶೆಟ್ಟಿ, ಮುಖ್ಯ ಶಿಕ್ಷಕಿ ಹರ್ಷಿತಾ, ಸಹ ಶಿಕ್ಷಕರಾದ ರಾಜೇಶ್, ಸುಧಾ, ಮೋನಿಕಾ, ಆಯೇಷಾ, ಜೀನತ್ ಇದ್ದರು.