ಬೀದರ್‌ನಲ್ಲಿ ಹಮ್ಮಿಕೊಂಡಿದ್ದ ಶರಣರ ವಚನ ದರ್ಶನ ಪ್ರವಚನಕ್ಕೆ ಜಿಪಂ ಸಿಇಒ ಶಿಲ್ಪಾ ಎಂ. ಚಾಲನೆ ನೀಡಿದರು. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಬಸವಲಿಂಗ ದೇವರು, ಶಕುಂತಲಾ ಬೆಲ್ದಾಳೆ, ಡಾ.ವಿದ್ಯಾ ಪಾಟೀಲ್, ಪ್ರೊ.ಎಸ್.ಬಿ. ಬಿರಾದಾರ್, ಯೋಗೇಂದ್ರ ಯದಲಾಪುರೆ, ಶಿವಕುಮಾರ ಭಾಲ್ಕೆ ಇದ್ದರು. 
ಜಿಲ್ಲೆ

ಮನಸ್ಸಿನ ಶುಚಿಗಾಗಿ ಪ್ರವಚನ ಆಲಿಸಿ

ಬೀದರ್: ಶರಣರು, ಸಂತರ ವಾಣಿ ಮತ್ತು ಪ್ರವಚನಗಳು ಮನಸ್ಸು ಶುಚಿಗೊಳಿಸುತ್ತವೆ. ಶ್ರಾವಣ ಮಾಸ ನಿಮಿತ್ತ ಒಂದು ತಿಂಗಳು ನಡೆಯುವ ಪ್ರವಚನವನ್ನು ಪ್ರತಿಯೊಬ್ಬರೂ ಆಲಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ. ಹೇಳಿದರು.

ನಗರದ ಡಾ.ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶರಣರ ವಚನ ದರ್ಶನ ಪ್ರವಚನಕ್ಕೆ ಚಾಲನೆ ನೀಡಿದ ಅವರು, ಶ್ರಾವಣ ಮಾಸ ಪೂರ್ತಿ ಮಹಾತ್ಮರ ಸಂದೇಶಗಳನ್ನು ಆಲಿಸಿ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ಭಾರತೀಯ ಪರಂಪರೆ, ಸಂಸ್ಕೃತಿಯಲ್ಲಿ ಶ್ರಾವಣ ಮಾಸಕ್ಕೆ ವಿಶೇಷ ಸ್ಥಾನಮಾನ ಇದೆ. ಶಿವನಾಮ, ಯೋಗ ಮತ್ತು ಧ್ಯಾನ ಮಾಡುವುದರಿಂದ ಶರೀರ ಮತ್ತು ಮನಸ್ಸಿಗೆ ನೆಮ್ಮದಿ, ಶಾಂತಿ ಲಭಿಸುತ್ತದೆ. ಇಂದಿನ ಮಕ್ಕಳು ನಮ್ಮ ಸಂಸ್ಕೃತಿ ಮೈಗೂಡಿಸಿಕೊಂಡು ಜೀವನ ಸಾಗಿಸಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರವಚನ ಸೇವಾ ಸಮಿತಿ ಅಧ್ಯಕ್ಷೆ ಶಕುಂತಲಾ ಕೆ.ಬೆಲ್ದಾಳೆ ಮಾತನಾಡಿ, ತಿಂಗಳ ಪ್ರವಚನದ ಜತೆಯಲ್ಲಿ ವಾರಕ್ಕೊಮ್ಮೆ ಸಾಂಸ್ಕೃತಿಕ ಚಟುವಟಿಕೆ ಮತ್ತು ವಚನ ಕಂಠಪಾಠ, ಭಾಷಣ ಸ್ಪರ್ಧೆ ಆಯೋಜಿಸಲಾಗುವುದು ಎಂದು ತಿಳಿಸಿದರು.

ಬೀದರ್ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷೆ ಡಾ.ವಿದ್ಯಾ ಪಾಟೀಲ್, ಪ್ರವಚನಕಾರರಾದ ಬೆಳಗಾವಿ ಜಿಲ್ಲೆ ಜನವಾಡದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಶ್ರೀ ಬಸವಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಪ್ರೊ.ಎಸ್.ಬಿ. ಬಿರಾದಾರ್, ಸಂಗ್ರಾಮ ಎಂಗಳೆ, ಉಮಾಕಾಂತ ಮೀಸೆ, ಸಂಗ್ರಾಮಪ್ಪ ಬಿರಾದಾರ್, ಶಿವಕುಮಾರ ಭಾಲ್ಕೆ, ಶ್ರೀಕಾಂತ ಬಿರಾದಾರ್, ಮಲ್ಲಿಕಾರ್ಜುನ ಹುಡಗೆ, ಮೀನಾಕ್ಷಿ ಪಾಟೀಲ್, ಪ್ರಸಾದ ನಿಲಯ ವ್ಯವಸ್ಥಾಪಕ ಶ್ರೀಕಾಂತ ಸ್ವಾಮಿ ಇತರರಿದ್ದರು.

ಯೋಗೇಂದ್ರ ಯದಲಾಪುರೆ ಪ್ರಾಸ್ತಾವಿಕ ಮಾತನಾಡಿದರು. ನೀಲಾಂಬಿಕೆ ಸೋರಳ್ಳಿ ಸ್ವಾಗತಿಸಿದರು. ಲಕ್ಷ್ಮೀ ಬಿರಾದಾರ್ ನಿರೂಪಣೆ ಮಾಡಿದರು. ಜಗದೇವಿ ನಾಗರಾಳೆ ವಂದಿಸಿದರು.

ಭಾಲ್ಕಿ ಹಿರೇಮಠದ ಪೂಜ್ಯರ ಮಾರ್ಗದರ್ಶನದಲ್ಲಿ ಬೀದರ್‌ನ ವಿದ್ಯಾನಗರ ಬಡಾವಣೆಯ ಪ್ರಸಾದ ನಿಲಯದಲ್ಲಿ ಶ್ರಾವಣ ಮಾಸ ನಿಮಿತ್ತ ಪ್ರವಚನ ಆಯೋಜಿಸಲಾಗಿದೆ. ಒಂದು ತಿಂಗಳು ನಿತ್ಯ ಸಂಜೆ ೬ಕ್ಕೆ ಪ್ರವಚನ ಆರಂಭವಾಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು.
| ಶಕುಂತಲಾ ಕೆ.ಬೆಲ್ದಾಳೆ ಪ್ರವಚನ ಸೇವಾ ಸಮಿತಿ ಅಧ್ಯಕ್ಷೆ