ಮದ್ದೂರು: ಜಾನಪದವು ಪ್ರಾಚೀನ ಕಾಲದಿಂದ ಜನಮಾನಸದಲ್ಲಿ ಬೇರೂರಿರುವ ಜನಪದ ಕಲೆ ಸಂಸ್ಕೃತಿ, ಜಾನಪದ ಹಾಡುಗಳು ಶ್ರಮಜೀವಿಗಳ ಮನಸ್ಸು ಆನಂದವನ್ನು ಅನುಭವಿಸಲು ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಚ್.ಕಾಳೀರಯ್ಯ ತಿಳಿಸಿದರು.
ತಾಲೂಕಿನ ಕೆ.ಹೊನ್ನಲಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಕಲಾ ಪರಿಷತ್ತು ಬೆಳ್ಳೂರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಡನೆ ಅಸಂಘಟಿತ ಕಲಾವಿದರ ಜಾಗೃತಿ ಜಾನಪದ ಮೇಳ ಮತ್ತು ಯುವಜನ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಾನಪದವನ್ನು ತಲ ತಲಾಂತರಗಳಿಂದ ಉಳಿಸಿ ಬೆಳೆಸಿದವರು ನಮ್ಮ ಜನಪದರು. ಮನಸ್ಸಿಗೆ ಮುದ ನೀಡುವ ಜನಪದ ಹಾಡುಗಳು, ಗಾಯನ, ತಮಟೆ ವಾದನ, ರಂಗ ಗೀತೆಗಳನ್ನು ಹಾಡುವ ಮೂಲಕ ರಾಜ್ಯ ಮಟ್ಟದ ಕಲಾವಿದರು ಇಂದು ಶಾಲೆಗಳಲ್ಲಿ ಈ ರೀತಿಯ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲೂ ಜಾನಪದಲ್ಲಿ ಆಸಕ್ತಿ ಮೂಡುವಂತೆ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಪನಿರ್ದೇಶಕರ ಕಚೇರಿಯ ಕನ್ನಡ ಭಾಷಾ ವಿಷಯ ಪರಿವೀಕ್ಷಕ ಎಚ್. ಎನ್. ನಾಗೇಂದ್ರಮೂರ್ತಿ ಮಾತನಾಡಿ, ಜಾನಪದ ಗಾಯನ ಜನಪದೀಯರ ಮೂಲಕ ಮುಂದುವರಿದಿದ್ದು, ಜಾನಪದ ಗೀತೆ, ಜಾನಪದ ನೃತ್ಯ, ಜನಪದ ಆಟಗಳು ಮೊದಲಾಗಿ ಕನ್ನಡ ನಾಡು ನುಡಿ ಸಂಸ್ಕೃತಿಯ ಪರಂಪರೆ ಶ್ರೀಮಂತಗೊಳಿಸಿವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲ ಎಚ್.ಸಿ.ಚೌಡೇಶ್ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರದೀಪ್, ಯುವಮುಖಂಡರಾದ ಮಂಜುನಾಥ್, ಎಸ್.ಕುಮಾರ್ ಮೊದಲಾದವರು ಭಾಗವಹಿಸಿದ್ದರು.
ಕಲಾವಿದರಾದ ಶಿವಕುಮಾರ್ ಬ್ಯಾಡರಹಳ್ಳಿ, ಚಲ್ಲಯ್ಯ ಕೊಡಂಬಳ್ಳಿ, ನೃತ್ಯ ಕಲಾವಿದರಾದ ಅವಿನಂ ಭೈರವ್, ವಿಶ್ವಬೆಳಕು ಮಹೇಶ್,ಪ್ರಮೋದ ಮೊದಲಾದವರು ಜಾನಪದ ಗೀತಗಾಯನ, ಜಾನಪದ ನೃತ್ಯ, ತಮಟೆ ವಾದನ, ಕವಿತೆ ವಾಚನಗಳನ್ನು ನಡೆಸಿಕೊಟ್ಟರು.
ವಿದ್ಯಾರ್ಥಿಗಳು ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಬಿ.ವಿ.ಹಳ್ಳಿ ನಾರಾಯಣ್ ಶಿಕ್ಷಕರಾದ ಚಿಕ್ಕಮರೀಗೌಡ, ಎಂ ವನಿತಾ, ಚೇತನ, ಭಾರತಿ, ಮಂಜುನಾಥ್, ಕಾರ್ತಿಕ್ ಇದ್ದರು.