ತುಮಕೂರು: ಕಾವ್ಯ ಎಂದರೇ ಬೇಕಾಬಿಟ್ಟಿ ಬರೆಯುವುದಲ್ಲ ಅದು ಧ್ಯಾನದಲ್ಲಿ ಹುಟ್ಟುವ ಅನುಭೂತಿಯೇ ಕಾವ್ಯ. ಚಿಕ್ಕಮಕ್ಕಳ ನಗುವಿನಂತೆ ಕಾವ್ಯ ಮುದ ನೀಡಬೇಕು, ಹೃದಯದ, ಮನಸ್ಸಿನ ಅಭಿವ್ಯಕ್ತಿಯಾಗಿರಬೇಕು, ಮನಸ್ಸಿಗೆ ನಾಟುವಂತಿರಬೇಕು ಎಂದು ಜನಪದ ವಿದ್ವಾಂಸ ಡಾ.ಮೀರಸಾಬಿಹಳ್ಳಿ ಶಿವಣ್ಣ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಭಾನುವಾರ ಏರ್ಪಾಟಾಗಿದ್ದ ದುಗ್ಗೇನಹಳ್ಳಿ ಸಿದ್ಧೇಶ್ ಅವರ "ಗುರುವಿನ ಜೋಳಿಗೆ' ಕವನ ಸಂಕಲವನ್ನು ಜನಾರ್ಪಣೆ ಮಾಡಿ ಮಾತನಾಡಿದ ಅವರು, ಕಾವ್ಯ ರಚನೆ ಮಾಡುವ ಕವಿ ತಾನು ನಿಂತನೀರಾಗದೆ ವಿಕಸನಗೊಳ್ಳಬೇಕು. ಚಲನಶೀಲತೆ, ಸೃಜನಶೀಲತೆ ಬೆಳೆಸಿಕೊಂಡು ಬೆಳೆಯಬೇಕು, ಅದು ಸರಿಯಾದ ಬೆಳವಣಿಗೆ ಎಂದರು.
ಕವಿ ದುಗ್ಗೇನಹಳ್ಳಿ ಸಿದ್ಧೇಶ್ ಅವರ ಹುಟ್ಟಿ ಬೆಳೆದ ಪರಿಸರ, ಅಭಿವ್ಯಕ್ತಿಯಲ್ಲಿ ಆಧ್ಯಾತ್ಮದ ಸ್ಪರ್ಶ ಅವರ ಕವಿತೆಗಳನ್ನು ಕಾಣುತ್ತಿದೆ. ಈಗಿನ ಸಾಹಿತ್ಯ ವಲಯದ ಎಡ-ಬಲ ಪಂಥದ ಬಡಿದಾಟದಲ್ಲಿ ನಮ್ಮ ಸತ್ವ ಕಳೆದುಕೊಳ್ಳುತ್ತಿದ್ದೇವೆ ಎನಿಸುತ್ತಿದೆ. ಬಹುತ್ವ ಎಂದು ಹೇಳುತ್ತೇವೆ, ಆದರೆ ಇನ್ನೊಬ್ಬರ ಅಭಿಪ್ರಾಯ ಆಲಿಸುವ, ಗೌರವಿಸುವ ಮನೋಭಾವ ಇಲ್ಲ. ನೆರೆಹೊರೆಯವರ ಮಾತನ್ನು ಸಹಿಸಿಕೊಳ್ಳುವುದು ಬಂಗಾರದ ಗುಣ ಎಂದು ಹೇಳಿದರು.
ಸಾಹಿತಿ ಡಾ.ಬಿ.ಜಿ.ಹರೀಶ್ ಮಾತನಾಡಿ "ಗುರುವಿನ ಜೋಳಿಗೆ' ಕೃತಿ ಕರಿತು ಮಾತನಾಡಿ, ಕವಿಯು ವೈಯಕ್ತಿಕವಾಗಿ ಬರೆದ ಕವಿತೆಗಳು ನಂತರ ಸಾರ್ವತ್ರಿಕವಾಗುತ್ತವೆ. ಆ ಎಚ್ಚರಿಕೆಯಿಂದ ಕವಿತೆಗಳ ರಚನೆಯಾಗಬೇಕು. ಕವಿತೆಗಳು ಸಮಾಜದ ನೋವಿಗೆ ಸಮಾಧಾನ ಹೇಳುವಂತಾಗಬೇಕು. ಕವಿತೆಗಳು ತನ್ನವೆನ್ನುವ ಭಾವನೆ ಓದುಗರಿಗೆ ಬರುವಂತಾದರೆ ಆ ಕವಿತೆಗಳು ಯಶಸ್ವಿಯಾಗುತ್ತವೆ. ಸಿದ್ಧೇಶ್ ಕವಿತೆಗಳಲ್ಲಿ ಭಾಷೆ, ರೂಪಕಗಳನ್ನು ಸೊಗಸಾಗಿ ಬಳಸಿಕೊಂಡಿದ್ದಾರೆ ಎಂದರು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ನಾಡೋಜ ಡಾ.ವೂಡೇ ಪಿ.ಕೃಷ್ಣ ಮಾತನಾಡಿ, ಕಾವ್ಯ ರಚನೆಯಲ್ಲಿ ಹಾಗೂ ಬದುಕಿನಲ್ಲಿ ಆಧ್ಯಾತ್ಮಿಕ ಸ್ಪರ್ಶ ಇರಬೇಕು. ಕುವೆಂಪು ಅವರ ಸಾಹಿತ್ಯದಲ್ಲೂ ಅಂತಹ ಸ್ಪರ್ಶ ಕಾಣಬಹುದು. ಕುವೆಂಪು ಅವರಿಗೆ ಆಧ್ಯಾತ್ಮದ ಬಗ್ಗೆ ವಿಶೇಷವಾದ ಒಲವಿತ್ತು ಎಂಬುದನ್ನು ಅವರ ಬರವಣಿಗೆಯಲ್ಲಿ ಕಾಣಬಹುದು ಎಂದರು.
ಗಾಂಧೀಜಿಯವರೂ ಪ್ರಶ್ನಾತಿತರೇನಲ್ಲ, ಅವರ ಕಾಲದಲ್ಲಿ ಅವರನ್ನು ಟೀಕಿಸಿ, ಪ್ರಶ್ನಿಸಿ ಉತ್ತರ ಪಡೆದವರಿದ್ದರು. ಆದರೆ, ತಮ್ಮನ್ನು ಟೀಕಿಸಿದವರನ್ನು, ಬೈದವರನ್ನು ಗಾಂಧೀಜಿ ಯಾವತ್ತೂ ವಿರೋಧಿಸಲಿಲ್ಲ, ಟೀಕಿಸಲಿಲ್ಲ. ಈ ಗುಣ ನಮಗೆ ಮಾರ್ಗದರ್ಶನವಾಗಬೇಕು. ಸಾಹಿತ್ಯ ಸ್ಪರ್ಧೆಯಿಂದ ಹುಟ್ಟುವುದಿಲ್ಲ, ಸಾಹಿತ್ಯ ಮನುಷ್ಯನ ಏಳಿಗೆಗೆ, ಅಭ್ಯುದಯಕ್ಕೆ ಪೂರಕವಾಗಿರಬೇಕು. ಎಲ್ಲ ಸಾಹಿತ್ಯದ ಗುರಿ ತತ್ವದತ್ತ ಸಾಗಬೇಕು ಎಂದು ಆಶಿಸಿದರು.
ಶೇಷಾದ್ರಿಪುರ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಅಶೋಕ್, ಸಾಹಿತಿ ಹಾಗೂ ಜಿಲ್ಲಾ ಕಸಾಪ ಕೋಶಾಧ್ಯಕ್ಷ ಎಂ.ಎಚ್.ನಾಗರಾಜು, ಸಾಹಿತಿ ಬಾ.ಹ.ರಮಾಕುಮಾರಿ, ಡಾ.ಸಿ.ರಂಗನಾಥ್, ರಾಣಿ, ಮರಿಯಮಾಬೀ ಮತ್ತಿತರರು ಇದ್ದರು.