ಜಿಲ್ಲೆ

ಮನರೇಗಾ ಉದ್ಯೋಗ ಚೀಟಿಗೆ ಇ-ಕೆವೈಸಿ ಕಡ್ಡಾಯ

ಮೈಸೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಸಕ್ರಿಯ ಕುಟುಂಬಗಳು ಹೊಂದಿರುವ ಉದ್ಯೋಗ ಚೀಟಿಗಳಿಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಕೃಷ್ಣ ತಿಳಿಸಿದ್ದಾರೆ.

ಮೈಸೂರು ತಾಲೂಕಿನ 27 ಗ್ರಾಮ ಪಂಚಾಯಿತಿಗಳಲ್ಲೂ ಇ-ಕೆವೈಸಿ ನೋಂದಣಿ ಪ್ರಾರಂಭವಾಗಿದ್ದು, ಉದ್ಯೋಗ ಚೀಟಿ ಹೊಂದಿರುವ ಕುಟುಂಬದವರು ಅಗತ್ಯ ದಾಖಲೆಯೊಂದಿಗೆ ಅಪ್ಡೇಟ್ ಮಾಡಿಸಬಹುದಾಗಿದೆ.

ಈ ಯೋಜನೆಯಡಿ ಅನುಷ್ಠಾನಗೊಳ್ಳುವ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ ಪ್ರತಿಯೊಬ್ಬ ಕೂಲಿಕಾರರ ಹಾಜರಾತಿಯನ್ನು ಎನ್‌ಎಂಎಂಎಸ್ ಮೂಲಕ ತೆಗೆದುಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಇ-ಕೆವೈಸಿ ಅಪ್ಡೇಟ್ ಅಗತ್ಯವಿರುತ್ತದೆ.

ಕೂಲಿಕಾರ್ಮಿಕರ ಹಾಜರಾತಿಯನ್ನು ತೆಗೆದುಕೊಳ್ಳುವಾಗ ಹಾಗೂ ಹಣವನ್ನು ಅವರ ಖಾತೆಗೆ ಜಮೆ ಮಾಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಇ-ಕೆವೈಸಿ ಮಾಡಿಸುವುದು ಸಹಕಾರಿಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.